ಧರ್ಮಸ್ಥಳ ಪ್ರಕರಣ: ದೂರುದಾರ ಗುರುತಿಸಿದ ಸ್ಥಳದಲ್ಲಿ ಅಗೆಯುವಿಕೆಗೆ ಅಡಚಣೆ
ಜೇಸಿಬಿ ಬಳಸಿ ಕಾರ್ಯಾಚರಣೆ ಮುಂದುವರಿಕೆಗೆ ವ್ಯವಸ್ಥೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿ ಮೃತದೇಹಗಳನ್ನು ಹೂತಿರುವುದಾಗಿ ದೂರುದಾರ ತೋರಿಸಿಕೊಟ್ಟಿರುವ ನೇತ್ರಾವತಿ ಸ್ನಾನಘಟ್ಟದ ಸಮೀಪ ಎಸ್ಐಟಿ ನಡೆಸುತ್ತಿರುವ ಅಗೆಯುವಿಕೆಗೆ ನುಗ್ಗಿ ಬರುತ್ತಿರುವ ನೀರಿನಿಂದಾಗಿ ಅಡಚಣೆಯಂಟಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ತನಿಖಾ ತಂಡ ಊಟಕ್ಕೆ ತೆರಳಿದೆ.
ಸದ್ಯ ಅಗೆಯುತ್ತಿರುವ ಸ್ಥಳ ನೇತ್ರಾವತಿ ನದಿ ತೀರವಾಗಿರುವುದರಿಂದ ಗುಂಡಿಗೆ ನೀರು ನುಗ್ಗುತ್ತಿದ್ದು, ಕಾರ್ಮಿಕರಿಗೆ ಮುಂದಕ್ಕೆ ಅಗೆಯಲು ಸಾಧ್ಯವಾಗುತ್ತಿಲ್ಲ. ಅಗೆದಂತೆ ಮರಳು ಕುಸಿಯುತ್ತಿದ್ದು, ನೀರು ಕೂಡಾ ನುಗ್ಗುತ್ತಿರುವುದರಿಂದ ಕೇವಲ ನಾಲ್ಕು ಅಡಿಗಳಷ್ಟು ಮಾತ್ರ ಅಗೆಯಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ಅಧಿಕಾರಿಗಳು ಅಗೆಯುವ ಕಾರ್ಯವನ್ನು ಸ್ಥಗಿತಗೊಳಿಸಿ ಊಟಕ್ಕೆ ತೆರಳಿದ್ದಾರೆ. ಊಟದ ವಿರಾಮದ ಬಳಿಕ ಕಾರ್ಯಾಚರಣೆ ಮುಂದುವರಿಯಲಿದೆ. ಸ್ಥಳಕ್ಕೆ ಇದೀಗ ಜೇಸಿಬಿ ಯಂತ್ರವನ್ನು ಕರೆಸಲಾಗಿದ್ದು, ಅದರ ಮೂಲಕ ಅಗೆಯುವ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.
ದೂರುದಾರ ಗುರುತಿಸಿರುವ ಸ್ಥಳಗಳ ಪೈಕಿ ಈಗಾಗಲೇ ಒಂದು ಸ್ಥಳದಲ್ಲಿ ಆರಂಭಿಸಿರುವ ಅಗೆಯುವ ಕಾರ್ಯ ಪೂರ್ಣಗೊಂಡ ಬಳಿಕವಷ್ಟೇ ಮುಂದಿನ ಸ್ಥಳದಲ್ಲಿ ತನಿಖೆ ನಡಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೋಮವಾರ ದೂರುದಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿದ್ದೆನೆ ಎಂದು ಹೇಳಲಾದ 13 ಸ್ಥಳಗಳನ್ನು ಪೊಲೀಸರು ಗುರುತು ಮಾಡಿದ್ದರು. ಆ ಸ್ಥಳಗಳಿಗೆ ಇಂದು ಬೆಳಗ್ಗೆ ಎಸ್ಐಟಿ ಅಧಿಕಾರಿಗಳು ಆಗಮಿಸಿ ಅಗೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ.







