ನಿಡ್ಡೋಡಿ: ಇಬ್ಬರು ಬಾಲಕಿಯರ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಸಂಘ ಪರಿವಾರದ ನಾಲ್ವರು ಕಾರ್ಯಕರ್ತರ ಬಂಧನ

ಮೂಡುಬಿದಿರೆ: ತಾಲೂಕಿನ ನಿಡ್ಡೋಡಿಯ ಮನೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ನಾಲ್ವರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ನಿಡ್ಡೋಡಿ ಕಲ್ಲಕುಮೇರು ನಿವಾಸಿ ಮಹೇಶ್, ಕಟೀಲು ಕೊಂಡೆಮೂಲ ನಿವಾಸಿಗಳಾದ ಯಜೇಶ್, ಶ್ರೀಕಾಂತ್ ಮತ್ತು ಕಿನ್ನಿಗೋಳಿ ಸಮೀಪದ ನಡುಗೋಡು ನಿವಾಸಿ ದಿಲೀಪ್ ಯಾನೆ ದೀಪು ಬಂಧಿತ ಆರೋಪಿಗಳೆಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ನಿಡ್ಡೋಡಿಯಲ್ಲಿ ಆರೋಪಿ ಮಹೇಶ್‌ಗೆ ಸೇರಿದ್ದ ಮನೆಯಲ್ಲಿ ಆತ ಒಂಟಿಯಾಗಿ ವಾಸವಾಗಿದ್ದನೆನ್ನಲಾಗಿದೆ. ಆದರೆ ಸೋಮವಾರ ಆತನ ಮನೆಯಲ್ಲಿ ಆತ ಸೇರಿದಂತೆ ನಾಲ್ವರು ಯುವಕರು, ಇಬ್ಬರು ಬಾಲಕಿಯರೊಂದಿಗೆ ಇರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ರಿಗೆ ಖಚಿತ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಆ ಮನೆಗೆ ದಾಳಿ ಮಾಡಿ ಬಾಲಕಿಯರನ್ನು ರಕ್ಷಿಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಬಾಲಕಿಯರ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೊಲೀಸರಿಗೆ ಸಾರ್ವಜನಿಕರ ಪ್ರಶಂಸೆ
ಸಕಾಲಿಕ ಕಾರ್ಯಾಚರಣೆ ನಡೆಸಿ ಬಾಲಕಿಯರಿಬ್ಬರ ಮೇಲಿನ ಸಂಭಾವ್ಯ ಸಾಮೂಹಿಕ ಅತ್ಯಾಚಾರ ಕೃತ್ಯವನ್ನು ತಪ್ಪಿಸಿದ ಮೂಡುಬಿದಿರೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಜನವಾದಿ ಮಹಿಳಾ ಸಂಘಟನೆ ಅಭಿನಂದನೆ: ಇಬ್ಬರು ಬಾಲಕಿಯರ ಸಾಮೂಹಿಕ ಅತ್ಯಾಚಾರಕ್ಕೆ ಸಿದ್ಧತೆ ನಡೆಸುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರನ್ನು ಜನವಾದಿ ಮಹಿಳಾ ಸಂಘಟನೆಯ ಮೂಡುಬಿದಿರೆ ತಾಲೂಕು ಸಮಿತಿ ಮತ್ತು ಸಿಪಿಎಂ ಅಭಿನಂದಿಸಿದೆ.
ಸಂಘಟನೆಯ ನಿಯೋಗವು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರನ್ನು ಭೇಟಿಯಾಗಿ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿತು.
ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆ ತಾಲೂಕು ಕಾರ್ಯದರ್ಶಿ ಲಕ್ಷ್ಮೀ, ಸದಸ್ಯೆಯರಾದ ಗಿರಿಜಾ, ರಕ್ಷಾ ಹಾಗೂ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಉಪಸ್ಥಿತರಿದ್ದರು.







