ಕುಡುಪು ಗುಂಪು ಹತ್ಯೆ ಪ್ರಕರಣಕ್ಕೆ ವರ್ಷ: ಅಶ್ರಫ್ ಕುಟುಂಬಕ್ಕೆ ಸಿಗದ ನ್ಯಾಯ

ಮಂಗಳೂರು, ಎ.27: ಕುಡುಪು ಗುಂಪು ಹತ್ಯೆ ಪ್ರಕರಣ ಎಂದೇ ಗುರುತಿಸಲ್ಪಟ್ಟಿರುವ ಕೇರಳ ಮೂಲದ ಅಶ್ರಫ್ ಹತ್ಯೆ ಪ್ರಕರಣಕ್ಕೆ ಸೋಮವಾರ (ಎ.27) ವರ್ಷ ತುಂಬುತ್ತಿವೆ. ಕಳೆದ ವರ್ಷದ ಎಪ್ರಿಲ್ 27ರ ಹಾಡಹಗಲೇ ನಗರ ಹೊರವಲಯದ ಕುಡುಪುವಿನ ಭಟ್ರಕಲ್ಲುರ್ಟಿ ದೈವಸ್ಥಾನದ ಹಿಂಬದಿಯಲ್ಲಿರುವ ಮೈದಾನದಲ್ಲಿ ನಡೆದ ಈ ಗುಂಪು ಹತ್ಯೆ ಪ್ರಕರಣವು ರಾಜ್ಯದಲ್ಲೇ ನಡೆದ ಪ್ರಥಮ ಗುಂಪು ಹತ್ಯೆ ಪ್ರಕರಣವಾಗಿ ದಾಖಲಿಸಲ್ಪಟ್ಟಿತ್ತು.
ಧಾರ್ಮಿಕ ಅಸಹಿಷ್ಣುತೆಯ ಕಾರಣಕ್ಕಾಗಿ ಉತ್ತರ ಭಾರತದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಹತ್ಯೆಗೈಯುತ್ತಿದ್ದ ಪ್ರಕರಣಗಳು ಮಾಮೂಲಿಯಾಗಿದ್ದರೆ, ರಾಜ್ಯದಲ್ಲಿ ಅದರಲ್ಲೂ ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಡೆದ ಈ ಪ್ರಕರಣವನ್ನು ಪೊಲೀಸ್ ಇಲಾಖೆಯು ಅತ್ಯಂತ ವ್ಯವಸ್ಥಿತವಾಗಿ ಮುಚ್ಚಿಹಾಕಲು ಯತ್ನಿಸಿತ್ತು ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಸಾಮಾಜಿಕ ಕಾರ್ಯಕರ್ತರು ನಡೆಸಿದ ಹೋರಾಟದ ಫಲವಾಗಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯು ತಡವಾಗಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು. ಅದರಂತೆ ಪೊಲೀಸರು 23 ಮಂದಿಯನ್ನು ಆರೋಪಿಗಳು ಎಂದು ಗುರುತಿಸಿ 21 ಮಂದಿಯನ್ನು ಬಂಧಿಸಿದ್ದರು. ಆ ಪೈಕಿ ವರ್ಷ ತುಂಬುವುದರೊಳಗೆ 17 ಮಂದಿ ಜಾಮೀನು ಪಡೆದು ಹೊರಬಂದಿದ್ದಾರೆ. ಒಬ್ಬನಿಗೆ ಜಾಮೀನು ಲಭಿಸಿದ್ದರೂ ಸೂಕ್ತ ಭದ್ರತೆಯನ್ನು ನೀಡದ ಕಾರಣ ಜೈಲಿನಲ್ಲಿದ್ದಾನೆ. ಇನ್ನೂ ಮೂವರು ಜಾಮೀನು ಸಿಗದೆ ಜೈಲಿನಲ್ಲಿದ್ದಾರೆ. ಒಬ್ಬನಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಇನ್ನೊಬ್ಬ ಆರೋಪಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಾರ್ಜ್ಶೀಟ್ ಸಲ್ಲಿಕೆ ಆಗಬೇಕಿದೆ. ಜೂನ್ನಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಗುಂಪು ಹತ್ಯೆಗೊಳಗಾದ ಅಶ್ರಫ್ ಕುಟುಂಬಕ್ಕೆ ಮಾತ್ರ ಇನ್ನೂ ನ್ಯಾಯ ಮರೀಚಿಕೆಯಾಗಿದೆ. ಸರಕಾರದಿಂದ ಸೂಕ್ತ ಪರಿಹಾರವೂ ಸಿಕ್ಕಿಲ್ಲ. ಈ ಕುಟುಂಬದ ಸದಸ್ಯರು ನ್ಯಾಯಕ್ಕಾಗಿ ಮಂಗಳೂರು-ಬೆಂಗಳೂರಿಗೆ ಅಲೆದಾಡುತ್ತಲೇ ಇದ್ದಾರೆ.
ಗುಂಪು ಥಳಿತ:
ವಾಮಂಜೂರು ಸಮೀಪದ ಕುಡುಪುವಿನ ಭಟ್ರಕಲ್ಲುರ್ಟಿ ದೈವಸ್ಥಾನದ ಹಿಂಬದಿಯ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಗುಂಪು ಎ.27ರ ಸಂಜೆ 5:30ರ ವೇಳೆಗೆ ಅಮಾಯಕ ಯುವಕನನ್ನು ಥಳಿಸಿ ಕೊಂದು ಹಾಕಿತ್ತು. ಮರದ ರೀಪು, ಗಿಡಗಂಟಿಯಿಂದ ಮನಬಂದಂತೆ ಥಳಿಸಿ ಮುಖಕ್ಕೆ ಕಲ್ಲಿನಿಂದ ಜಜ್ಜಿ ಗುರುತು ಸಿಗದಂತೆ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಮುಖ, ಕೈಕಾಲಿಗೆ ಥಳಿಸಿದ್ದಲ್ಲದೆ ಮರ್ಮಾಂಗಕ್ಕೆ ತುಳಿದಿದ್ದರು ಎಂದು ಆರೋಪಿಸಲಾಗಿತ್ತು. ಮಾನಸಿಕವಾಗಿ ಒಂದಷ್ಟು ಅಸ್ವಸ್ಥಗೊಂಡಿದ್ದಂತೆ ಕಂಡು ಬಂದಿದ್ದ ಅಮಾಯಕ ಯುವಕನನ್ನು ಆರಂಭದಲ್ಲಿ ಉತ್ತರ ಭಾರತ ಮೂಲದ ವಲಸೆ ಕಾರ್ಮಿಕ ಎಂದು ಭಾವಿಸಲಾಗಿತ್ತು.
ಕೃತ್ಯ ನಡೆದು 24 ಗಂಟೆ ಕಳೆದರೂ ಪೊಲೀಸರು ಘಟನೆಯನ್ನು ಲಘುವಾಗಿ ಪರಿಗಣಿಸಿ ಪ್ರಾಥಮಿಕ ಮಾಹಿತಿ ನೀಡಲು ಮೀನಮೇಷ ಎಣಿಸಿದ್ದರು ಎಂಬ ಆರೋಪವೂ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಪೊಲೀಸರ ನಿಷ್ಕ್ರಿಯತೆ ಮತ್ತು ತಾರತಮ್ಯದ ವಿರುದ್ಧ ಕೆಲವು ಸಂಘಟನೆಗಳ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮುಖಂಡರು ಹೋರಾಟ ನಡೆಸಿದ ಫಲವಾಗಿ ಎಚ್ಚೆತ್ತುಕೊಂಡ ರಾಜ್ಯ ಸರಕಾರ ಪೊಲೀಸ್ ಇಲಾಖೆಗೆ ಬಿಸಿ ಮುಟ್ಟಿಸಿದ ಬಳಿಕ ತನಿಖೆ ತೀವ್ರಗೊಂಡಿತು. ಹಾಗೇ ಈತ ಕೇರಳದ ವಯನಾಡಿನ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಪುಲ್ಪಳ್ಳಿ ಅಶ್ರಫ್ ಎಂದು ಗುರುತಿಸಲಾಗಿತ್ತು.
ಆರೋಪಿಯಿಂದಲೇ ದೂರು:
ಎ.27ರ ಸಂಜೆ 5:30ಕ್ಕೆ ಸಂತೋಷ್ ಯಾನೆ ನಟೇಶ್ ಕುಮಾರ್ರೊಂದಿಗೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಹಿಂಬದಿಯಲ್ಲಿರುವ ಮೈದಾನದ ಕಡೆಗೆ ಹೋಗುವ ಮಣ್ಣು ರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಅಂಗಾತ ಬಿದ್ದುಕೊಂಡಿದ್ದು, ಈ ವ್ಯಕ್ತಿಯ ಬಳಿ ಹೋದಾಗ ಮೃತಪಟ್ಟಿರುವುದು ಕಂಡು ಬಂದಿದೆ. ಸುಮಾರು 25ರಿಂದ 30 ವರ್ಷ ವಯಸ್ಸಿನ ಈ ವ್ಯಕ್ತಿಯು ರವಿವಾರ ಅಪರಾಹ್ನ 2:30ರಿಂದ ಸಂಜೆ 5:30ರ ಮಧ್ಯೆ ಮೃತಪಟ್ಟಿರಬಹುದು. ನೀಲಿಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಮೈಮೇಲೆ ಶರ್ಟ್ ಇರಲಿಲ್ಲ. ಈ ವ್ಯಕ್ತಿಯ ಮೈಮೇಲೆ ಅಲ್ಲಲ್ಲಿ ಮಣ್ಣು ಅಂಟಿಕೊಂಡಿದೆ. ಎದೆಯಿಂದ ಸ್ವಲ್ಪಮೇಲ್ಗಡೆ ಭುಜದ ಬಳಿ, ಕಾಲಿನ ಬೆರಳಿನ ಬಳಿ, ತುಟಿಯಲ್ಲಿ, ಬಲಕಣ್ಣಿನ ಕೆಳಗಡೆ ಅಲ್ಲಲ್ಲಿ ತರಚಿದ ಗಾಯಗಳು ಕಂಡುಬಂದಿದೆ. ಈ ವ್ಯಕ್ತಿಯು ಯಾವುದೋ ನಶೆಯಲ್ಲಿ ಬಿದ್ದು ಗಾಯಗಳುಂಟಾಗಿ ಅಥವಾ ಯಾರೊಂದಿಗೋ ಗಲಾಟೆ, ಉರುಡಾಟದಿಂದ ಗಾಯಗೊಂಡು ಸ್ಥಳದಲ್ಲಿ ಬಿದ್ದು ಮೃತಪಟ್ಟಿರಬಹುದು. ಈ ವ್ಯಕ್ತಿಯ ಸಾವಿನ ಬಗ್ಗೆ ಅನುಮಾನ ಉಂಟಾಗುತ್ತಿದೆ ಎಂದು ಮಂಜುನಾಥ್ ಎಂಬಾತ ದೂರು ನೀಡಿದ್ದ. ಅದರಂತೆ ಪೊಲೀಸರು ಅಸಹಜ ಪ್ರಕರಣ ದಾಖಲಿಸಿದ್ದರು.
ದೂರು ನೀಡಿದ ವ್ಯಕ್ತಿಯು ಆರೋಪಿಗಳ ಪೈಕಿ ಒಬ್ಬಾತನಾಗಿದ್ದ ಎಂಬುದು ಪೊಲೀಸರಿಗೆ ತಿಳಿದಿತ್ತು ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಸಾಮಾಜಿಕ ಹೋರಾಟಗಾರರ ಸತತ ಪ್ರಯತ್ನದ ಬಳಿಕ ದೀಪಕ್ ಎಂಬವರು ನೀಡಿದ ದೂರಿನಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.
ಗುಂಪು ಹಲ್ಲೆ-ಕೊಲೆ:
ಮೊದಲ ಕೇಸು: ದೇಶಾದ್ಯಂತ ಬಿಎನ್ಎಸ್ (ಭಾರತೀಯ ನ್ಯಾಯ ಸಂಹಿತಾ) ಕಾಯ್ದೆ ಜಾರಿಯಾದ ಬಳಿಕ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಗುಂಪು ಹಲ್ಲೆ-ಕೊಲೆ ಮೊದಲ ಪ್ರಕರಣ ಇದಾಗಿದೆ. ಆರೋಪಿಗಳ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 37/2025, ಕಲಂ 102 (2), 103 (2), 189 (2), 190, 191 (1), 191 (3), 115 (2), 240, ಭಾರತೀಯ ನ್ಯಾಯ ಸಂಹಿತೆ 2023 (ಬಿಎನ್ಎಸ್ 2023)ರಡಿ ಪ್ರಕರಣ ದಾಖಲಿಸಲಾಗಿತ್ತು.
21 ಆರೋಪಿಗಳ ಬಂಧನ: ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಕುಡುಪು ಆಸುಪಾಸಿನ ಸಚಿನ್ ಟಿ., ದೇವದಾಸ್ ಅಂಚನ್, ಮಂಜುನಾಥ್, ನಟೇಶ್ ಕುಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ವಿವಿಯನ್ ಆಲ್ವಾರೀಸ್, ಶ್ರೀದತ್ತ, ಧನುಷ್, ಕಿಶೋರ್ ಕುಮಾರ್, ರಾಹುಲ್, ಪ್ರದೀಪ್ ಕುಮಾರ್, ಮನೀಷ್ ಶೆಟ್ಟಿ, ಸಾಯಿದೀಪ್, ಸಂದೀಪ್ ಬಸವರಾಜ್, ದೀಕ್ಷಿತ್ ಯಾನೆ ಮುನ್ನ, ಅನಿಲ್, ಯತಿರಾಜ್ ಯಾನೆ ಯತಿನ್, ಆದರ್ಶ್ ಪಂಡಿತ್, ಸಚಿನ್, ಕೆ. ಸುಶಾಂತ್, ಅನಿಲ್ ಕುಮಾರ್ ಸಹಿತ 21 ಮಂದಿಯನ್ನು ಬಂಧಿಸಿದ್ದರು. ಆರೋಪಿ ರವೀಂದ್ರ ನಾಯ್ಕಿ ನಿರೀಕ್ಷಣಾ ಜಾಮೀನು ಪಡೆದಿದ್ದ. ನಿತೇಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ವಿಶೇಷ ಸರಕಾರಿ ಅಭಿಯೋಜಕರ ನೇಮಕ:
ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ವಾದಿಸಲು ಶಿವಪ್ರಸಾದ್ ಆಳ್ವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ರಾಜ್ಯ ಸರಕಾರವು ನೇಮಿಸಿತ್ತು. ಅಲ್ಲದೆ ದ.ಕ.ಜಿಲ್ಲೆಯಲ್ಲಿ ನಡೆಯುವ ಕೋಮು ಸೂಕ್ಷ್ಮ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವನ್ನು ಹೈಕೋರ್ಟ್ನಲ್ಲಿ ಪ್ರತಿನಿಧಿಸಲು ಐವರನ್ನು ಒಳಗೊಂಡ ಕಾನೂನು ಅಧಿಕಾರಿಗಳ ಸಮಿತಿಯನ್ನು ರಚಿಸಿ ರಾಜ್ಯ ಗೃಹ ಇಲಾಖೆಯು ಮಹತ್ವದ ಆದೇಶ ಹೊರಡಿಸಿತ್ತು.
ಕಠಿಣ ಶಿಕ್ಷೆಗೆ ಕುಟುಂಬಸ್ಥರ ಆಗ್ರಹ
‘‘ಅಶ್ರಫ್ ರನ್ನು ಗುಂಪೊಂದು ಥಳಿಸಿ ಕೊಂದು ಇಂದಿಗೆ ಒಂದು ವರ್ಷವಾಗುತ್ತಿದೆ. ಆ ನೋವು ಇನ್ನೂ ಮಾಸಿಲ್ಲ. ಕಳೆದೊಂದು ವರ್ಷದಿಂದ ನಾವು ನ್ಯಾಯಕ್ಕಾಗಿ ಅಲೆದಾಡುತ್ತಲೇ ಇದ್ದೇವೆ. ನಮಗೆ ನ್ಯಾಯ ದೊರಕಿಸಿಕೊಡಲು ಇಡೀ ಕೇರಳವೇ ಒಗ್ಗೂಡಿ ನಿಲ್ಲುತ್ತದೆ ಎಂದು ಮಲಯಾಳಿಯಾಗಿ ನಾವು ಭಾವಿಸಿದ್ದೆವು. ಆದರೆ, ಕೇರಳ ಸರಕಾರ ಅಥವಾ ಇತರ ಚುನಾಯಿತ ಪ್ರತಿನಿಧಿಗಳಿಂದ ಯಾವುದೇ ಗಮನಾರ್ಹ ಪ್ರಯತ್ನ ನಡೆಯದಿರುವುದು ತೀವ್ರ ಬೇಸರದ ಸಂಗತಿಯಾಗಿದೆ. ಕರ್ನಾಟಕ ಸರಕಾರದ ಮೇಲೆ ಅಗತ್ಯ ಒತ್ತಡ ಹೇರುವಲ್ಲಿ ಕೇರಳ ಸರಕಾರ ವಿಫಲವಾಗಿದೆ. ಕರ್ನಾಟಕ ಸರಕಾರದಿಂದ ನಮಗೆ ನಿರೀಕ್ಷಿತ ನ್ಯಾಯ ಸಿಕ್ಕಿಲ್ಲ. ಸೂಕ್ತ ಪರಿಹಾರವೂ ಸಿಕ್ಕಿಲ್ಲ. ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯಕ್ಕೆ ವರ್ಗಾಯಿಸಿ ಆದಷ್ಟು ಬೇಗ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕಿದೆ.’’
‘‘ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿಗಳನ್ನು ಕಸ್ಟಡಿಯಲ್ಲಿಯೇ ಇರಿಸಬೇಕು ಮತ್ತು ಗುಂಪು ಹಲ್ಲೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಆಡಳಿತವು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿ ನಾವು ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ.’’
‘‘ಈ ಹೋರಾಟ ಕೇವಲ ಅಶ್ರಫ್ ಗಾಗಿ ಅಲ್ಲ. ಭಾರತದಾ ದ್ಯಂತ ಹರಡುತ್ತಿರುವ ಗುಂಪು ಹಲ್ಲೆಗಳ (ಮಾಬ್ ಲಿಂಚಿಂಗ್) ವಿರುದ್ಧ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಒಂದು ಭಾಗವಾಗಿದೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಳ್ಳುವುದನ್ನು ನಿಲ್ಲಿಸಿ, ತನಿಖೆಯನ್ನು ಪೂರ್ಣಗೊಳಿಸುವ, ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯಕ್ಕೆ ವರ್ಗಾಯಿಸುವ ಮತ್ತು ಅಶ್ರಫ್ಗೆ ಸಂಪೂರ್ಣ ನ್ಯಾಯ ಒದಗಿಸುವ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಪೂರೈಸಬೇಕು’’ ಎಂದು ಹತ್ಯೆಯಾದ ಅಶ್ರಫ್ನ ಕುಟುಂಬದ ಸದಸ್ಯರು ಒತ್ತಾಯಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾದ ಭಯಾನಕ ಹಲ್ಲೆ
ಅಶ್ರಫ್ ಮೇಲೆ ಕ್ರೂರವಾಗಿ ಹಲ್ಲೆಗೈದಿರುವುದು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳಲ್ಲಿ ಬಹಿರಂಗಗೊಂಡಿತ್ತು. ದೇಹ ಮತ್ತು ತಲೆಗೆ ಆದ ತೀವ್ರ ಗಾಯಗಳ ಪರಿಣಾಮವಾಗಿ ಮೆದುಳಿನಲ್ಲಿನ ರಕ್ತಸ್ರಾವ ಮತ್ತು ಮೂತ್ರಪಿಂಡಕ್ಕೆ ಆಗಿದ್ದ ಗಾಯದಿಂದಾಗಿ ಅಶ್ರಫ್ ಸಾವನ್ನಪ್ಪಿರುವುದಾಗಿ ವರದಿ ದೃಢಪಡಿಸಿದೆ. ಹಲ್ಲೆಯಿಂದ ಕಿಡ್ನಿಗೆ ತೀವ್ರ ಹಾನಿಯಾಗಿದ್ದು, ಕೂಡ ಸಾವಿಗೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮರಣೋತ್ತರ ಪರೀಕ್ಷೆಯನ್ನು ಎ.28ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ದೇರಳಕಟ್ಟೆಯ ಕ್ಷೇಮಾ ಆಸ್ಪತ್ರೆಯ ಡಾ. ಮಹಾಬಲೇಶ್ ಶೆಟ್ಟಿ ಸಹಿತ ವಿಧಿವಿಜ್ಞಾನ ತಜ್ಞರ ಸಮ್ಮುಖದಲ್ಲಿ ನಡೆಸಲಾಗಿತ್ತು. ಅಶ್ರಫ್ರ ದೇಹದ ಹಲವು ಭಾಗಗಳಲ್ಲಿ ತೀವ್ರವಾದ ಗಾಯಗಳು ಕಂಡುಬಂದಿವೆ. ಹಲ್ಲೆಗೆ ಬಳಸಲಾಗಿತ್ತು ಎಂದು ಶಂಕಿಸಲಾದ ನಾಲ್ಕು ಮರದ ಕೋಲುಗಳನ್ನು ಕೂಡ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿತ್ತು. ಅಶ್ರಫ್ ದೇಹದ ಮೇಲೆ ಕಂಡುಬಂದ ಗಾಯಗಳ ಮಾದರಿ ಆ ಕೋಲುಗಳ ಗುಣಲಕ್ಷಣಗಳಿಗೆ ಹೊಂದಿಕೆಯಾಗುತ್ತದೆ ಎಂದು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವಿಧಿವಿಜ್ಞಾನ ತಜ್ಞೆ ಡಾ.ರಶ್ಮಿ ಕೆ.ಎಸ್. ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.






