ಪೋಷಕರು ಮಕ್ಕಳಿಗೆ ಶಿಕ್ಷಣವನ್ನು ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು: ಝಕರಿಯ ಜೋಕಟ್ಟೆ

ಕೊಣಾಜೆ: ಪೋಷಕರು ಮಕ್ಕಳಿಗೆ ಆಸ್ತಿ ಮಾಡಿಡುವ ಬದಲು ಅವರಿಗೆ ಸರಿಯಾದ ಶಿಕ್ಷಣವನ್ನು ನೀಡಬೇಕು. ಅವಾಗ ಮಕ್ಕಳು ನೈತಿಕತೆಯಲ್ಲಿ ಮುಂದೆ ಸಾಗುತ್ತಾರೆ ಮಾತ್ರವಲ್ಲದೇ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮೂಡಿ ಬರುತ್ತಾರೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಝಕರಿಯ ಜೋಕಟ್ಟೆ ಅಭಿಪ್ರಾಯ ಪಟ್ಟರು.
ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ವತಿಯಿಂದ ನಡೆದ ಪ್ರತಿಭೋತ್ಸವದ ಪ್ರತಿಭಾ ಪುರಸ್ಕಾರದಲ್ಲಿ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಝಕರಿಯ ಜೋಕಟ್ಟೆ, ಹಿಂದಿನ ಕಾಲದಲ್ಲಿ ವಿದ್ಯೆ ಇಲ್ಲದೆಯೂ ಸ್ವಂತ ಬುದ್ದಿವಂತಿಕೆಯಲ್ಲಿ ಎಂಟು ಸಾವಿರ ಮಂದಿಗೆ ಉದ್ಯೋಗ ಕೊಟ್ಟು ಅವರ ಮನೆಯನ್ನು ಬೆಳಗಿಸುವ ಕಾರ್ಯ ಆಗಿದೆ. ಆದರೆ ಇಂದು ವಿದ್ಯೆ ಇಲ್ಲದೇ ಯಾವುದೇ ಸಾಧನೆ ಅಸಾಧ್ಯ , ವಿದ್ಯೆ ವ್ಯಕ್ತಿಯನ್ನು ಸುಸಂಸ್ಕೃತರನ್ನಾಗಿ ಮಾಡುವುದಲ್ಲದೇ ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ಕಲಿಸಿ ಕೊಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ವಿದ್ಯಾವಂತರಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಾಮಾಜಿಕ, ಧಾರ್ಮಿಕ ಮುಂದಾಳು ಪಿಲಿಕಳ ಗುತ್ತು ರವಿ ರೈ ಫಜೀರು ಇವರು ವಾರ್ಷಿಕೋತ್ಸವವು ಸಂಸ್ಥೆಗಳ ಇರುವಿಕೆಯನ್ನು ಗುರುತಿಸಿಕೊಳ್ಳುವುದರ ಜೊತೆಗೆ ಮಕ್ಕಳ ಪ್ರತಿಭೆಗಳನ್ನು ಅಭಿವ್ಯಕ್ತ ಗೊಳಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುತ್ತವೆ ಎಂದರು.
ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಕಡೆಂಜ ಸೋಮಶೇಖರ್ ಚೌಟ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯ ಜೋಕಟ್ಟೆ ಇವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.
ಅಥಿತಿಗಳಾಗಿ ಸಮಾಜ ಸೇವಕರಾದ ಕಡೆಂಜ ಅಶೋಕ್ ಕುಮಾರ್ ಚೌಟ , ಝಕರಿಯ ಮಲಾರ್, ಆಡಳಿತ ಮಂಡಳಿಯ ಸದಸ್ಯರು ಕಡೆಂಜ ಉದಯಕುಮಾರ್ ಚೌಟ, ಕಲ್ಲಾಯಿ ದುರ್ಗಾಪ್ರಸಾದ್ ರೈ , ನಿವೃತ್ತ ಮುಖ್ಯ ಶಿಕ್ಷಕರುಗಳಾದ ಯಶೋಧ, ನಥಾನಿಯಲ್ ಎಡ್ವರ್ಡ್ ಐಮನ್, ರಾಧಾಕೃಷ್ಣ ರೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಮಜೀದ್, ರಾಜ್ಯ ಮಟ್ಟದ ತರಬೇತುದಾರರು ರಫೀಕ್ ಮಾಸ್ಟರ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮೋಹಿನಿ ಮುಂತಾದವರು ಉಪಸ್ಥಿತರಿದ್ದರು.
ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪ್ರೇಮಲತಾ ಸ್ವಾಗತಿಸಿ, ಶಿಕ್ಷಕ ರವಿಶಂಕರ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.







