ಪ್ರಧಾನಿ ಮೋದಿಯನ್ನು ಅವಹೇಳನ ಮಾಡಿಲ್ಲ; ಪಾಕ್ ಪ್ರಧಾನಿ ವಿರುದ್ದ ಹಾಕಿದ ಪೋಸ್ಟ್ ಬಿಜೆಪಿಗರಿಂದ ತಿರುಚಲ್ಪಟ್ಟಿದೆ: ಅಮಳ ರಾಮಚಂದ್ರ ಸ್ಪಷ್ಟನೆ

ಮಂಗಳೂರು: ನಾನು ಯಾವತ್ತೂ ದೇಶದ ಪ್ರಧಾನಿಯನ್ನು ಅವಹೇಳನ ಮಾಡಿಲ್ಲ, ನಾನು ಪಾಕಿಸ್ತಾನ ಪ್ರಧಾನಿ ವಿರುದ್ಧ ಹಾಕಿದ ಪೋಸ್ಟನ್ನು ಬಿಜೆಪಿಯವರು ತಿರುಚಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟ್ ಹಾಕಿರುವುದಾಗಿ ಪೋಲೀಸರಿಗೆ ದೂರು ನೀಡಿದ್ದಾರೆ ಎಂದು ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಅಮಳ ರಾಮಚಂದ್ರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಉಗ್ರರು ಧರ್ಮ ಕೇಳಿ ಪ್ರವಾಸಿಗರನ್ನು ಕೊಂದಿದ್ದಾರೆ. ಇದೇ ವಿಚಾರವನ್ನಿಟ್ಟು ಪಾಕ್ ಪ್ರಧಾನಿಯನ್ನು ಉದ್ದೇಶಿಸಿ ʼಕಾರ್ಕೋಟಕ ವಿಷʼ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದೇನೆ. ಈ ಪೋಸ್ಟ್ ನಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ನಾನು ಯಾವುದೇ ಬರಹವನ್ನೂ ಹಾಕಿಲ್ಲ. ಆದರೆ ಬಿಜೆಪಿಯವರು ಇದನ್ನು ಪ್ರಧಾನಿ ಮೋದಿಯವರ ವಿರುದ್ಧ ಮಾಡಿರುವ ಪೋಸ್ಟ್ ಎಂದು ಪೋಲೀಸರಿಗೆ ದೂರು ನೀಡಿದ್ದಾರೆ. ಬಿಜೆಪಿಯವರ ಮನಸ್ಸಲ್ಲಿ ಪ್ರಧಾನಿಯನ್ನು ಅವಹೇಳನ ಮಾಡುವ ಉದ್ಧೇಶವಿದ್ದು, ಪಾಕ್ ಪ್ರಧಾನಿ ವಿರುದ್ಧ ಮಾಡಿದ ಪೋಸ್ಟ್ ಅನ್ನು ನರೇಂದ್ರ ಮೋದಿ ವಿರುದ್ಧ ಎಂದು ಬಿಂಬಿಸಿದ್ದಾರೆ ಎಂದರು.
ಪೋಸ್ಟ್ ಮಾಡಿರೋದು ನನ್ನ ವೈಯುಕ್ತಿಕ ಪೇಜ್ ನಲ್ಲಾಗಿದ್ದು, ಇದಕ್ಕೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ನನ್ನ ವ್ಯಕ್ತಿಗತ ಅಭಿಪ್ರಾಯವಾಗಿದ್ದು, ಇದೇ ಕಾರಣಕ್ಕೆ ಮಾಜಿ ಶಾಸಕರಾದ ಸಂಜೀವ ಮಠಂದೂರು ನನ್ನ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ನನ್ನ ಸ್ಥಾನಮಾನದ ಬಗ್ಗೆ ಮಾತನಾಡುವ ಮಾಜಿ ಶಾಸಕರಿಗೆ ತಮ್ಮ ಕಛೇರಿಗೆ ಬಂದ ಮಹಿಳೆಯ ಜೊತೆ ಲವ್ವಿಡವ್ವಿ ಮಾಡಿ ಸೆಲ್ಫಿ ತೆಗೆದಾಗ ಅವರಿಗೆ ಅವರ ಸ್ಥಾನಮಾನದ ಕಾಳಜಿ ಇರಲಿಲ್ಲವೇ? ಮಾಡಬಾರದನ್ನು ಮಾಡಿ ನಾಚಿಕೆಯಿಲ್ಲದೆ ಊರಿಡೀ ತಿರುಗುವ ಮಾಜಿ ಶಾಸಕರು ತನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವಾಗ ಆ ಬಗ್ಗೆ ಪೋಲೀಸ್ ದೂರು ನೀಡಿಲ್ಲ. ಅವರು ತನ್ನ ಇನ್ನೂ ಫೋಟೋಗಳು ಬಾರದಿರಲು ತಡೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ರೀತಿ ಮಾಡಿ ನನ್ನ ಬಾಯಿ ಮುಚ್ಚಿಸುವ ಕೆಲಸವನ್ನು ಮಾಜಿ ಶಾಸಕರು ಮತ್ತು ಅವರ ಪಟಾಲಂ ಮಾಡುತ್ತಿದೆ. ಆದರೆ ನನ್ನ ಬಾಯಿ ಮುಚ್ಚಿಸಲು ಇವರಿಗೂ ಯಾವತ್ತಿಗೂ ಸಾಧ್ಯವಿಲ್ಲ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.