ಕವಿಗಳು ಸಮಾಜ ಘಾತುಕ, ಸಾಂಸ್ಕೃತಿಕ ಘಾತುಕ ಶಕ್ತಿಗಳ ಬಗ್ಗೆ ಜಾಗೃತರಾಗಬೇಕಾಗಿದೆ: ವಿಲ್ಸನ್ ಕಟೀಲ್
ಜನನುಡಿ 2026: ಪ್ರತಿರೋಧ ಕವಿ ಗೋಷ್ಠಿ

ಮಂಗಳೂರು, ನ.29: ಇಂದಿನ ಕವಿಗಳು ಸಮಾಜ ಘಾತುಕ, ಸಾಂಸ್ಕೃತಿಕ ಘಾತುಕ ಶಕ್ತಿಗಳ ಬಗ್ಗೆ ಜಾಗೃತರಾಗಬೇಕಾಗಿದೆ. ನಮ್ಮ ಅಸ್ತಿತ್ವವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಕವಿ ವಿಲ್ಸನ್ ಕಟೀಲ್ ಹೇಳಿದ್ದಾರೆ,
ಅವರು ಅಭಿಮತ, ಮಂಗಳೂರು ಮತ್ತು ಭಗತ್ ಸಿಂಗ್ ಮೆಮೋರಿಯಲ್ ಕಲ್ಚರಲ್ ಟ್ರಸ್ಟ್ ವತಿಯಿಂದ ಬಲ್ಮಠ ಕೆಟಿಸಿ ಕ್ಯಾಂಪಸ್ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆಯುತ್ತಿರುವ 'ಜನನುಡಿ 2026' ಸಮಾವೇಶದ ಎರಡನೇ ದಿನವಾದ ರವಿವಾರ ಪ್ರತಿರೋಧದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
"ಕವಿಗಳಿಗೆ ವೇದಿಕೆ ಬೇಕೆಂದು ಸಿಕ್ಕಸಿಕ್ಕಲ್ಲಿ ಹೋಗುತ್ತೇವೆ, ಸಿಲುಕುತ್ತೇವೆ. ನಮಗೆ ಗೊತ್ತಿಲ್ಲದೆಯೇ ಇಂತಹ ತಪ್ಪುಗಳು ಹೊರಳುತ್ತವೆ. ಆದ್ದರಿಂದ ಇಂದಿನ ಕವಿ ಸಮಾಜ ಘಾತುಕ ಶಕ್ತಿಗಳ ಬಗ್ಗೆ ಎಷ್ಟು ಜಾಗರೂಕವಾಗಿರಬೇಕೋ, ಸಾಂಸ್ಕೃತಿಕ ಘಾತುಕ ಶಕ್ತಿಗಳ ಬಗ್ಗೆಯೂ ಅಷ್ಟೇ ಎಚ್ಚರವಾಗಿರಬೇಕು ಎಂದವರು ಅಭಿಪ್ರಾಯಿಸಿದರು.
ರಾಜಕೀಯ ಕ್ಷೇತ್ರ ಎಲ್ಲವನ್ನು ನುಂಗಿ ಹಾಕಿದೆ. ರಾಜಕೀಯದಲ್ಲೂ ಪ್ರಧಾನ ಮಂತ್ರಿ ಮಾತ್ರ ಉಳಿದ ಸಚಿವರು ಅಸ್ತಿತ್ವವನ್ನು ಕಳೆದುಕೊಂಡ ಸ್ಥಿತಿ ಇದೆ. ಇಂತಹ ವಾತವರಣರಲ್ಲಿ ಕೃತಿಗಳು ಮಾರಾಟವಾಗಬೇಕು ಹೊರತು ಕವಿಗಳು ಮಾರಾಟವಾಗಬಾರದು. ನಮ್ಮ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬೇಕು ಅದುವೇ ನಮ್ಮ ಅಸ್ಮಿತೆಯ ರಕ್ಷಣೆ. ಪ್ರತಿರೋಧದ ಕವಿಗೋಷ್ಠಿಯಲ್ಲಿ ನಮ್ಮ ಅಸ್ತಿತ್ವವನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆದಿದೆ ಎಂದು ವಿಲ್ಸನ್ ಕಟೀಲ್ ಹೇಳಿದರು.
ಈ ವೇಳೆ ಅವರು ತಮ್ಮ 'ಚಪ್ಪಲಿಗಳು 'ಕವಿತೆಯನ್ನು ವಾಚಿಸಿದರು.
ಆಶಯದ ಮಾತುಗಳನ್ನಾಡಿದ ಕವಿ ಶಂಕರ ಕೆಂಚನೂರು, ಯುವ ಕವಿಗಳಿಗೆ ಅವಕಾಶ ನೀಡುವ ಚಿಂತನೆ ಹಿರಿಯ ಕವಿಗಳಲ್ಲಿ ಮೂಡಬೇಕಾಗಿದೆ. ಇಲ್ಲದೆ ಹೋದಲ್ಲಿ ಯುವ ತಲೆಮಾರಿನ ಕವಿಗಳು ಅವಕಾಶ ವಂಚಿತರಾಗುತ್ತಾರೆ ಎಂದರು.
ನಿರುದ್ಯೋಗ, ಆಡಳಿತದ ವೈಫಲ್ಯ, ತಳ ಸಮುದಾಯದ ಮೇಲಿನ ಶೋಷಣೆ, ಘನತೆಯ ಬದುಕು, ಪಠ್ಯಪುಸ್ತಕಗಳಲ್ಲಿನ ಹೇರಿಕೆ, ಮತದಾನದ ಹಕ್ಕು ಕಳೆದು ಕೊಂಡವರು, ಪಂಚರ್ ಹಾಕುವವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ತಮ್ಮ ಅಸ್ತಿತ್ವವನ್ನು ಸಾರುವ ಪ್ರತಿರೋಧದ ಕವಿತೆಗಳನ್ನು ಕವಿಗಳಾದ ರೇಣುಕಾ ನಿಡಗುಂದಿ, ಚಾಂದ್ ಪಾಷ, ಸ್ಟ್ಯಾನಿ ಬೇಳ, ರೇಷ್ಮಾ ಬಾರಿಗ, ಮಲ್ಲಮ್ಮ ಯಾಟಗಲ್, ರಮ್ಯಾ ಮೂರ್ನಾಡು, ಫಾತಿಮಾ ರಲಿಯಾ, ಚಂಸು ಪಾಟೀಲ, ಸಿರಾಜ್ ಬಿಸರಳ್ಳಿ-ಕೊಪ್ಪಳ, ದೀಪ ಬುದ್ದೆ ವಾಚಿಸಿದರು.
ಸಚಿನ್ ಅಂಕೋಲ ಡಾ.ಅನುಪಮಾರ ಕವಿತೆ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.






