ಪೊಲೀಸರು ಪ್ರಾರ್ಥನಾಲಯಗಳಲ್ಲಿ ನೈತಿಕ ಪಾಠ ಬೋಧಿಸಲಿ : ಅಶ್ರಫ್

ಮಂಗಳೂರು, ನ.10: ದ.ಕ.ಜಿಲ್ಲಾ ವ್ಯಾಪ್ತಿಯ ಪೊಲೀಸರು ಗೋ ಸಂಬಂಧಿತ ಕಾನೂನುಗಳ ಬಗ್ಗೆ ನೈತಿಕ ಪಾಠ ಬೋಧಿಸಲು ಠಾಣೆಗಳನ್ನು ಬಳಕೆ ಮಾಡಲಿ, ಪ್ರಾರ್ಥನಾ ಸ್ಥಳಗಳನ್ನು ಅಲ್ಲ ಎಂದು ಮಾಜಿ ಮೇಯರ್, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ವ್ಯಾಪ್ತಿಯ ಪೊಲೀಸರು ಗೋಸಂಬಂಧಿತ ಕಾನೂನು, ನಿಯಮಾವಳಿ, ನಿರ್ದೇಶನಗಳ ನೈತಿಕ ಪಾಠ ಬೋಧಿಸಲು ಒಂದು ನಿರ್ಧಿಷ್ಟ ಸಮುದಾಯದ ಪ್ರಾರ್ಥನಾ ಸ್ಥಳಗಳನ್ನು ಬಳಕೆ ಮಾಡುತ್ತಿರುವುದು ಅಸಾಂವಿಧಾನಿಕ. ಪ್ರಾರ್ಥನಾ ಸ್ಥಳಗಳು ಶ್ರದ್ಧಾ ಕೇಂದ್ರಗಳು ಆಗಿವೆ. ಇದು ಧಾರ್ಮಿಕ ನಂಬಿಕೆಯನ್ನು ಬೆಸೆದು ಕೊಂಡಿರುವುದರಿಂದ ದೇಶ ಅಥವಾ ರಾಜ್ಯದ ಕಾನೂನುಗಳ ಬಗ್ಗೆ ಬೋಧಿಸಲು ಇರುವ ಪಾಠ ಶಾಲೆ ಅಲ್ಲ. ಪ್ರತಿ ಧಾರ್ಮಿಕ ಬೋಧನೆಗಳು ಸತ್ಕರ್ಮವನ್ನು ಬೋಧಿಸುತ್ತದೆ ವಿನಃ ಯಾವುದೇ ಅಪರಾಧವನ್ನು ಉತ್ತೇಜಿಸುವುದಿಲ್ಲ ಎಂಬುದನ್ನು ಪೊಲೀಸರು ಮತ್ತು ಸರಕಾರ ಅರಿಯಬೇಕು ಎಂದು ತಿಳಿಸಿದ್ದಾರೆ.
ಒಂದು ನಿರ್ದಿಷ್ಟ ಸಮುದಾಯವನ್ನು ಅಪರಾಧ ಶಂಕಿತರನ್ನಾಗಿಸುವುದು ಧಾರ್ಮಿಕ ಹಕ್ಕಿನ ಉಲ್ಲಂಘನೆ ಆಗಿದೆ ಎಂಬುದನ್ನು ಪೊಲೀಸರು ಅರಿಯಬೇಕಿದೆ. ಪೊಲೀಸರು ತಕ್ಷಣ ಈ ಬೋಧನೆ ನಿಲ್ಲಿಸಬೇಕು. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಆಗಿದೆ ಎಂದು ಅಶ್ರಫ್ ತಿಳಿಸಿದ್ದಾರೆ.





