ಮಂಗಳೂರು | ಗುಂಪು ಹತ್ಯೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದ ಪೊಲೀಸರು!
►ಮೊದಲು ಯುಡಿಆರ್; ಆಕ್ರೋಶ ಹೆಚ್ಚುತ್ತಿದ್ದಂತೆ ಗುಂಪು ಹತ್ಯೆ ಪ್ರಕರಣ ದಾಖಲು ►ಅಮಾನತು ಆದೇಶದಲ್ಲಿರುವುದೇನು?

ಮಂಗಳೂರು : ಮಂಗಳೂರಿನಲ್ಲಿ ಕೇರಳದ ಅಶ್ರಫ್ ಅವರ ಗುಂಪು ಹತ್ಯೆಯನ್ನು ಮುಚ್ಚಿ ಹಾಕಲು ಪೊಲೀಸರೇ ಪ್ರಯತ್ನಿಸಿರುವುದು ಕೊನೆಗೂ ಅಧಿಕೃತವಾಗಿ ಬಯಲಾಗಿದೆ. ಮೂವರು ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಅಮಾನತು ಆದೇಶದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ.
ಮಂಗಳೂರಿನ ಕುಡುಪು ಗುಂಪು ಹತ್ಯೆ ಪ್ರಕರಣದಲ್ಲಿ ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್ ಕಾನ್ ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್ ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.
ಗುಂಪು ಹತ್ಯೆ ಎಂದು ಸ್ಥಳೀಯರು ತಿಳಿಸಿದ್ದರೂ ಅದನ್ನು ಅಸಹಜ ಸಾವು ಎಂಬಂತೆ ತೋರಿಸಲು ಪೊಲೀಸರೇ ಪ್ರಯತ್ನಿಸಿರುವುದು ಖಚಿತವಾಗಿದೆ. ಒಬ್ಬರು ಇನ್ಸ್ ಪೆಕ್ಟರ್ ಹಾಗು ಇಬ್ಬರು ಸಿಬ್ಬಂದಿಗಳ ಅಮಾನತು ಆದೇಶದಲ್ಲಿ ಈ ಬಗ್ಗೆ ವಿವರಣೆಯಿದೆ.
ಅಮಾಯಕ ಮಾನಸಿಕ ಅಸ್ವಸ್ಥ ವಯನಾಡಿನ ಅಶ್ರಫ್ ರನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಗಂಭೀರ ಕರ್ತವ್ಯಲೋಪದಡಿ ಇನ್ಸ್ ಪೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್ ಕಾನ್ ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್ ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ.
►ಅಮಾನತು ಆದೇಶದಲ್ಲೇನಿದೆ?
ಅಮಾನತು ಆದೇಶದಲ್ಲಿ ಈ ಮೂವರನ್ನು ಅಮಾನತು ಮಾಡಲು ಕಾರಣವನ್ನು ವಿವರವಾಗಿ ನೀಡಲಾಗಿದೆ. ಮಂಗಳೂರು ನಗರ ಪೊಲೀಸ್ ನ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ವರದಿಯಂತೆ ಏ.27 ರಂದು ಮಧ್ಯಾಹ್ನ 2-30 ಗಂಟೆಯಿಂದ ಸಂಜೆ 5-30 ಗಂಟೆ ಮಧ್ಯೆ ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಭಟ್ರ ಕಲ್ಲುರ್ಟಿ ದೈವಸ್ಥಾನದ ಹಿಂಬದಿಯಲ್ಲಿರುವ ಮೈದಾನ ಬಳಿ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದೂರು ದಾಖಲಾಗಿತ್ತು. ಇದೇ ಘಟನೆಯ ಕುರಿತು ದಿನಾಂಕ ಏ.28 ರಂದು ದೀಪಕ್ ಎಂಬವರು ನೀಡಿದ ದೂರಿನಂತೆ ಮೊ.ನಂ. 37/2025 ಕಲಂ 189(2), 191(1)(3), 115(2), 103(2), 240 ಜೊತೆಗೆ 190 ಬಿಎನ್‌ಎಸ್ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಗೆ, ಕ್ರಿಕೆಟ್ ಪಂದ್ಯಾಟ ಆಡುತ್ತಿರುವ ಆಟಗಾರರು ಮತ್ತು ಅಲ್ಲಿ ನರೆದಿದ್ದ ಪ್ರೇಕ್ಷಕರು ಗುಂಪು ಹಲ್ಲೆ ನಡೆಸುತ್ತಿದ್ದ ಬಗ್ಗೆ ದೀಪಕ್ ಎಂಬುವರು ಪೊಲೀಸರಿಗೆ ಪೋನ್ ಕರೆ ಮಾಡಿ ತಿಳಿಸಿದ್ದರು. ಗುಂಪು ಹಲ್ಲೆ ನಡೆದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರ ಮತ್ತು ಸಿಬ್ಬಂದಿಗಳಿಗೆ ಮಾಹಿತಿಯಿತ್ತು.
ಆದರೆ ಇನ್ಸ್ ಪೆಕ್ಟರ್ ಶಿವಕುಮಾರ್ ಕೆ ಆರ್ ಅವರು ಘಟನೆಯ ಬಗ್ಗೆ ಮೇಲಾಧಿಕಾರಿಗೆ ತಿಳಿಸದೇ UDR ಅಂದರೆ Unnatural Death Report, ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ಆ ಬಳಿಕ ಒತ್ತಡ ಹೆಚ್ಚಿದ ಬಳಿಕ ಗುಂಪು ಹತ್ಯೆ ಪ್ರಕರಣ ದಾಖಲಿಸಲಾಯಿತು.
ಘಟನೆಯ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀನ್ ಠಾಣಾ ಕಾನ್ಸ್ ಟೇಬಲ್ ದೀಪಕ್ ರವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಗುಪ್ತದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್ ಟೇಬಲ್ ಚಂದ್ರ.ಪಿ ಅವರಿಗೆ ತಿಳಿಸಿದ್ದರು. ಆದರೆ ಅವರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಕಲೆ ಹಾಕಲಿಲ್ಲ. ಘಟನೆಯ ಬಗ್ಗೆ ಮೇಲಾಧಿಕಾರಿರವರಿಗೆ ತಿಳಿಸಲೂ ಇಲ್ಲ. ಇದೇ ಕಾರಣಕ್ಕೆ ಗುಂಪು ಹತ್ಯೆ ಪ್ರಕರಣವು ಮೊದಲು ಯುಡಿಆರ್ ಪ್ರಕರಣವಾಗಿ ದಾಖಲಾಗಿತ್ತು.
ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದ ಸ್ಥಳದಲ್ಲಿ ಬೀಟ್ ಕರ್ತವ್ಯಕ್ಕೆ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಯಲ್ಲಾಲಿಂಗ ಅವರನ್ನು ನಿಯೋಜಿಸಲಾಗಿತ್ತು. ಆದರೆ ಅವರು ತನ್ನ ಬೀಟ್ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವ ಬಗ್ಗೆಯಾಗಲೀ ಘಟನೆಯ ಬಗ್ಗೆಯಾಗಲೀ ಮೇಲಾಧಿಕಾರಿಯ ಗಮನಕ್ಕೆ ತಾರದೇ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷತನ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಗುಂಪು ಹತ್ಯೆ ಬಗ್ಗೆ ಮಾಹಿತಿ ತಿಳಿದಿದ್ದರೂ, ಮೇಲಾಧಿಕಾರಿಗಳ ಗಮನಕ್ಕೆ ತಾರದೇ ತೀವ್ರ ಕರ್ತವ್ಯ ನಿರ್ಲಕ್ಷ ತೋರಿದ ಆರೋಪದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ಕೆ.ಆರ್, ಹೆಡ್ ಕಾನ್ಸ್ ಟೇಬಲ್ ಚಂದ್ರ.ಪಿ, ಪೊಲೀಸ್ ಕಾನ್ಸ್ ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತು ಮಾಡಿ, ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ.







