ಉಳ್ಳಾಲ | ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ಆರೋಪ: ಪೆರಿಬೈಲ್ ಮಸ್ಜಿದುಲ್ ಹುದಾಗೆ ಪೊಲೀಸರ ಭೇಟಿ

ಸಾಂದರ್ಭಿಕ ಚಿತ್ರ
ಉಳ್ಳಾಲ: ಧ್ವನಿವರ್ಧಕ ಬಳಕೆ ವಿಚಾರವಾಗಿ ಸೋಮೇಶ್ವರ ಪೆರಿಬೈಲ್ ನ ಮಸ್ಜಿದುಲ್ ಹುದಾ ಮಸೀದಿಗೆ ಸೋಮವಾರ ರಾತ್ರಿ ಪೊಲೀಸರು ಭೇಟಿ ನೀಡಿ ವಿಚಾರಿಸಿದ ಘಟನೆ ನಡೆದಿದೆ. ಪೊಲೀಸರ ಈ ಕ್ರಮಕ್ಕೆ ಮಸೀದಿ ಆಡಳಿತ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಘಟನೆ ವಿವರ: ಪೆರಿ ಬೈಲ್ ನಲ್ಲಿರುವ ಮಸೀದಿಯಲ್ಲಿ ರಾತ್ರಿ ಜೋರಾಗಿ ಧ್ವನಿವರ್ಧಕ ಬಳಸುತ್ತಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಬಾರಿ ಉಳ್ಳಾಲ ಪೊಲೀಸರು ಸಂಬಂಧಪಟ್ಟ ಮಸೀದಿಗೆ ಭೇಟಿ ನೀಡಿ ಧ್ವನಿವರ್ಧಕ ಶಬ್ದ ಕಡಿಮೆ ಮಾಡುವಂತೆ ಆಡಳಿತ ಸಮಿತಿಗೆ ಸೂಚಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಮಸೀದಿ ಆಡಳಿತ ಸಮಿತಿ, ಧ್ವನಿವರ್ಧಕವನ್ನು ಮಿತಿಯಲ್ಲೇ ಬಳಸುತ್ತೇವೆ. ರವಿವಾರ ಮಾತ್ರ ಕಾರ್ಯಕ್ರಮ ಇರುತ್ತದೆ. ಅದೂ ರಾತ್ರಿ 10 ಗಂಟೆಯೊಳಗೆ ಧ್ವನಿವರ್ಧಕ ಸ್ಥಗಿತಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಸೀದಿಗೆ ಭೇಟಿ ನೀಡಿರುವ ಪೊಲೀಸರ ಕ್ರಮಕ್ಕೆ ಮಸೀದಿ ಆಡಳಿತ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 1112ಕ್ಕೆ ದೂರು ಬಂದಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿರುವುದಾಗಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ 'ವಾರ್ತಾಭಾರತಿ ಜೊತೆ ಮಾತನಾಡಿರುವ ಮಸ್ಜಿದುಲ್ ಹುದಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಬಾವ, "ನಮ್ಮ ಮಸೀದಿಗೆ ಪೊಲೀಸರು ಸೋಮವಾರ ರಾತ್ರಿ ಭೇಟಿ ನೀಡಿ ಮಸೀದಿಯಲ್ಲಿ ಡಿಜೆ ಇಡುತ್ತಾರೆ, ಧ್ವನಿವರ್ಧಕ ಜೋರಾಗಿ ಬಳಸುತ್ತಿರುವ ಬಗ್ಗೆ 112ಕ್ಕೆ ದೂರು ಬಂದಿರುವುದಾಗಿ ಹೇಳಿದ್ದಾರೆ. ಇದೇ ವಿಚಾರವಾಗಿ ಈ ಹಿಂದೆಯೂ ಎರಡು ಬಾರಿ ಬಂದಿದ್ದರು. ನಮ್ಮ ಮಸೀದಿಯಲ್ಲಿ ಡಿಜೆ ಇಲ್ಲ. ಧ್ವನಿವರ್ಧಕ ಮಾತ್ರ ಬಳಸುತ್ತಿರುವುದಾಗಿ ಅವರಿಗೆ ಮನವರಿಕೆ ಮಾಡಿದ್ದೇವೆ'' ಎಂದು ತಿಳಿಸಿದ್ದಾರೆ.
ಮಸೀದಿಯಲ್ಲಿ ರವಿವಾರ ರಾತ್ರಿ ಸ್ವಲಾತ್ ಮಜ್ಲಿಸ್ ಬಿಟ್ಟರೆ ಬೇರೇನೂ ಕಾರ್ಯಕ್ರಮ ಇರುವುದಿಲ್ಲ. ಪ್ರತೀ ರಾತ್ರಿ 10 ಗಂಟೆ ವೇಳೆ ಮಸೀದಿ ಮುಚ್ಚುತ್ತೇವೆ. 10 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ಸರ್ವೋಚ್ಚ ನ್ಯಾಯಾಲಯ ಅನುಮತಿಸಿದೆ ಎಂದವರು ಹೇಳಿದರು.
ಪೊಲೀಸ್ ಸಹಾಯವಾಣಿಯ ದುರುಪಯೋಗದ ವಿರುದ್ಧ ದೂರು
ಪೊಲೀಸ್ ಇಲಾಖೆ ಸಹಾಯವಾಣಿ 112 ಸಂಖ್ಯೆಯನ್ನು ಕೆಲವರು ದುರುಪಯೋಗ ಮಾಡುತ್ತಿದ್ದಾರೆ. ಈ ಬಗ್ಗೆ ಮಸೀದಿ ಆಡಳಿತ ಸಮಿತಿಯು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರಿಗೆ ದೂರು ನೀಡಿದೆ ಎಂದು ಮಸ್ಜಿದುಲ್ ಹುದಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಬಾವ ತಿಳಿಸಿದ್ದಾರೆ.
-----------------------
ಮಸೀದಿಯಲ್ಲಿ ರಾತ್ರಿ ವೇಳೆ ಧ್ವನಿವರ್ಧಕ ಬಳಸುವ ಬಗೆ ದೂರು ಬಂದಿತ್ತು. ಮಸೀದಿ ಸಮೀಪದಲ್ಲಿ ಓದುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಆರೋಪ ಕೂಡಾ ಇತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಸೀದಿಗೆ ತೆರಳಿ ವಿಚಾರಿಸಿದ್ದಾರೆಯೇ ಹೊರತು ತೊಂದರೆ ಕೊಟ್ಟಿಲ್ಲ.
-ಧನ್ಯಾ,
ಎಸಿಪಿ, ಮಂಗಳೂರು ದಕ್ಷಿಣ ಉಪ ವಿಭಾಗ







