ದ್ವೇಷ ಭಾಷಣಕಾರರನ್ನು ಬಂಧಿಸಿ ಜೈಲಿಗಟ್ಟಿದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ: ಎಸ್ಕೆಎಸೆಸ್ಸೆಫ್ ವೆಸ್ಟ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮತ್ತೆ ಮತ್ತೆ ಅಹಿತಕರ ಘಟನೆಗಳು ನಡೆಯಲು ಕೋಮುವಾದಿಗಳ ದ್ವೇಷ ಭಾಷಣವೇ ಪ್ರಮುಖ ಕಾರಣವಾಗಿದೆ. ಆರಂಭದಲ್ಲೇ ದ್ವೇಷ ಭಾಷಣಕಾರರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರೆ ಅಮಾಯಕರ ಕೊಲೆಯಾಗುತ್ತಿರಲಿಲ್ಲ. ಪ್ರತೀಕಾರದ ಕೃತ್ಯಗಳು ನಡೆಯುತ್ತಿರಲಿಲ್ಲ. ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ಆಗುತ್ತಲಿದೆ. ಕೊಲೆ ಆರೋಪಿಗಳನ್ನು ಮಾತ್ರವಲ್ಲ, ಕೊಲೆಗೆ ಪ್ರೇರಣೆ ನೀಡಿದ ದ್ವೇಷ ಭಾಷಣಕಾರರನ್ನೂ ಕೂಡ ಬಂಧಿಸಿ ಜೈಲಿಗೆ ಅಟ್ಟಬೇಕು. ಆವಾಗ ಮಾತ್ರ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ.
ಎಸ್ಕೆಎಸೆಸ್ಸೆಫ್ ಕಾರ್ಯಕರ್ತ ಮತ್ತು ಕೊಳತ್ತಮಜಲು ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಹಾಗೂ ಕುಡುಪುವಿನಲ್ಲಿ ಅಶ್ರಫ್‌ರನ್ನು ಹತ್ಯೆಗೈದ ಕೃತ್ಯವನ್ನು ಖಂಡಿಸಿ ಮತ್ತು ದ್ವೇಷ ಭಾಷಣಗಾರರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್ಕೆಎಸೆಸ್ಸೆಫ್ ವೆಸ್ಟ್ ಜಿಲ್ಲಾ ಸಮಿತಿಯ ವತಿಯಿಂದ ಶನಿವಾರ ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಮುಖ ಭಾಷಣಕಾರರ ಮಾತಿದು.
ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ಬಳಿಕ ಸಾಮಾನ್ಯ ವರ್ಗಾವಣೆ ಆರಂಭಗೊಂಡಿವೆ. ಈ ಸಾಮಾನ್ಯ ಪೊಲೀಸರನ್ನು ಜಿಲ್ಲೆಯೊಳಗೆ ವರ್ಗಾವಣೆಗೊಳಿಸಿದರೆ ಸಾಲದು. ಅವರನ್ನು ರಾಜ್ಯದ ಇತರ ಜಿಲ್ಲೆಗಳಿಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ಈ ವರ್ಗಾವಣೆ ಪ್ರಕ್ರಿಯೆಗೆ ಅರ್ಥವಿಲ್ಲ. ದ್ವೇಷ ಭಾಷಣ ಯಾರೇ ಮಾಡಲಿ, ಅವರನ್ನು ಬಂಧಿಸಿ ಜೈಲಿಗೆ ಅಟ್ಟಿದರೆ ಇತರರಿಗೆ ಪಾಠವಾಗಲಿದೆ. ಅದರೊಂದಿಗೆ ಡ್ರಗ್ಸ್ ಜಾಲವನ್ನೂ ಮಟ್ಟಹಾಕಬೇಕು. ಹತ್ಯೆ ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಎಸ್ಕೆಎಸೆಸ್ಸೆಫ್ ಮುಖಂಡರಾದ ಅಮೀರ್ ತಂಙಳ್ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ರಿಯಾಝ್ ರಹ್ಮಾನಿ ಉದ್ಘಾಟಿಸಿದರು. ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ದುಆಗೈದರು. ಮುಖಂಡರಾದ ಅನೀಸ್ ಕೌಸರಿ, ಇಕ್ಬಾಲ್ ಬಾಳಿಲ ಮುಖ್ಯ ಭಾಷಣಗೈದರು. ಇರ್ಶಾದ್ ದಾರಿಮಿ ಮಿತ್ತಬೈಲ್, ಕೊಲೆಯಾದ ಅಬ್ದುಲ್ ರಹ್ಮಾನ್‌ರ ಸಹೋದರ ಹನೀಫ್ ಮತ್ತಿತರರು ಉಪಸ್ಥಿತರಿದ್ದರು.
ಆರೀಫ್ ಕಮ್ಮಾಜೆ ಸ್ವಾಗತಿಸಿದರು. ಫಾರೂಕ್ ದಾರಿಮಿ ಗ್ರಾಮಚಾವಡಿ ವಂದಿಸಿದರು. ಇರ್ಫಾನ್ ಅಸ್ಲಮಿ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.