ಪರಿಶಿಷ್ಟ ಪಂಗಡದಲ್ಲಿಯೂ ಒಳಮೀಸಲಾತಿ ಜಾರಿಗೊಳಿಸಲು ಆಗ್ರಹ: ಹೋರಾಟ ಸಮಿತಿ ಸಭೆ

ಮಂಗಳೂರು: ಕರ್ನಾಟಕ ಸರಕಾರ ಪರಿಶಿಷ್ಟ ಪಂಗಡದಲ್ಲಿಯೂ ಒಳ ಮೀಸಲಾತಿಯ ಜಾರಿಗೆ ಮುಂದಾಗಬೇಕು ಎಂದು ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ರವಿವಾರ ಪರಿಶಿಷ್ಟ ಪಂಗಡದ ಒಳಮೀಸಲಾತಿ ಸಾಧ್ಯತೆ ಬಗ್ಗೆ ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಅವರು ಅಧಿಕ ಜನಸಂಖ್ಯೆ ಇರುವ ಒಂದೆರಡು ಪಂಗಡಗಳಿಗೆ ಹೆಚ್ಚು ಸೌಲಭ್ಯಗಳು ದೊರೆಯುತ್ತಿದೆ. ಆದರೆ ಕಡಿಮೆ ಜನಸಂಖ್ಯೆಯ ಜಾತಿಗಳಿಗೆ ಏನೂ ದೊರೆಯುತ್ತಿಲ್ಲ. ಈ ಸಮಸ್ಯೆ ನಿವಾರಣೆಯಾಗಬೇಕಿದೆ ಎಂದರು.
ಮೀಸಲಾತಿಯ ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಚಾರದಲ್ಲಿ 2024 ಆಗಸ್ಟ್ 1ರಂದು ಸುಪ್ರೀಂ ಕೋರ್ಟಿನ ಏಳು ಸದಸ್ಯರ ಸಂವಿಧಾನ ಪೀಠವು ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆ ಎಂದು ಸ್ಪಷ್ಟವಾಗಿ ಹೇಳಿತ್ತು. ಸುಪ್ರೀಂಕೋರ್ಟು ಪರಿಶಿಷ್ಟ ಜಾತಿಗಳಿಗೆ ಮಾತ್ರವಲ್ಲ ಪರಿಶಿಷ್ಟ ಪಂಗಡಗಳಿಗೂ ಅನ್ವಯಿಸುವಂತೆ ಈ ತೀರ್ಪನ್ನು ನೀಡಿದೆ. ಆದರೆ ಕರ್ನಾಟಕ ಸರಕಾರ ಪರಿಶಿಷ್ಟ ಜಾತಿಗಳ ವಿಚಾರದಲ್ಲಿ ಮಾತ್ರ ಗಮನಹರಿಸುತ್ತಿದೆ ಎಂದು ದೂರಿದರು.
1994ರಲ್ಲಿ ಕರ್ನಾಟಕ ಸರಕಾರ ಒಬಿಸಿ ಮೀಸಲಾತಿಯಲ್ಲಿ ವರ್ಗೀಕರಣವನ್ನು ಜಾರಿಮಾಡಿತು. 2022ರಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಜನ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಿತು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನ್ಯಾ.ನಾಗಮೋಹನ ದಾಸ್ ಆಯೋಗದ ಶಿಫಾರಸ್ಸನ್ನು ಪಡೆದು ಪರಿಶಿಷ್ಟ ಜಾತಿಗಳ ನಡುವೆ ವರ್ಗೀಕರಣದ ಸೂತ್ರವನ್ನು ಜಾರಿ ಮಾಡಿತು ಎಂದು ಹೇಳಿದರು.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವರ್ಗಿಕರಣ ಮಾಡುವಾಗ ಮೂರು ಆಂಶಗಳ ಬಗ್ಗೆ ಗಮನಕೊಡಲು ರಾಜ್ಯ ಸರಕಾರಗಳಿಗೆ ನಿರ್ದೇಶಿಸಿತ್ತು. ನಿಖರ ದತ್ತಾಂಶಗಳ ಸಂಗ್ರಹ , ಹಿಂದುಳಿದಿರುವಿಕೆಯ ಅಧ್ಯಯನ, ಸಮಾನರು - ಅಸಮಾನರು ಒಂದೇ ಗುಂಪಿನಲ್ಲಿ ಇರದಂತೆ ಎಚ್ಚರ ವಹಿಸುವಂತೆ ಹೇಳಿತ್ತು. ಈ ಅಂಶಗಳ ಆಧಾರದಲ್ಲಿ ಅಧ್ಯಯನ ನಡೆಸಿ, ವರ್ಗೀಕರಣದ ಸೂತ್ರಗಳನ್ನು ಸರಕಾರಕ್ಕೆ ಶಿಫಾರಸ್ಸು ಮಾಡಲು ಕರ್ನಾಟಕ ಸರಕಾರ ಪ್ರತ್ಯೇಕ ಆಯೋಗ ವನ್ನು ತಕ್ಷಣ ರಚಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.
ದೂರದ ಈಶಾನ್ಯ ರಾಜ್ಯಗಳಿಂದ ಹಿಡಿದು ಕೇರಳದವರೆಗೆ ಪರಿಶಿಷ್ಟ ಪಂಗಡಗಳು ಗುಡ್ಡಗಾಡು ಪ್ರದೇಶಗಳಲ್ಲಿ ಹರಡಿಕೊಂಡಿವೆ. ಛತ್ತೀಸ್‌ಗಢ (ಶೇ 30.6),ಜಾರ್ಖಂಡ್ (ಶೇ 26.2), ಒಡಿಶಾ (ಶೇ 22.8), ಮಧ್ಯಪ್ರದೇಶ ( ಶೇ 21.1) ಆದಿವಾಸಿ ಜನಸಾಂದ್ರತೆಯ ರಾಜ್ಯಗಳೆಂದು ಗುರುತಿಸಲ್ಪಟ್ಟಿವೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯದ ಸುದೀರ್ಘ ಹೋರಾಟದಿಂದ ಎಸ್ಟಿ ಮೀಸಲಾತಿಯ ಜೊತೆಗೆ ಎಸ್ಸಿ ಮೀಸಲಾತಿಯೂ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳಗೊಂಡಿತು. ಮಾದಿಗ ಸಮಾಜದ
ಮೂರು ದಶಕಗಳ ಹೋರಾಟದಿಂದ ಒದಗಿ ಬಂದಿರುವ ಒಳ ಮೀಸಲಾತಿ ಪರಿಶಿಷ್ಟ ಪಂಗಡಗಳ ಒಳಗಿನ ಅನೇಕ ದನಿಯಿಲ್ಲದ ಜಾತಿಗಳಿಗೆ ನ್ಯಾಯೋಚಿತ ಹಂಚಿಕೆಯಾಗಬೇಕಿದೆ ಎಂದು ನುಡಿದರು.
ಕರ್ನಾಟಕದ ಪರಿಶಿಷ್ಟ ಪಂಗಡದಲ್ಲಿ ಒಟ್ಟು 50 ಜಾತಿಗಳಿವೆ. 2011ರ ಕೇಂದ್ರ ಸರಕಾರದ ಜನಗಣತಿಯ ಪ್ರಕಾರ ಈ 50 ಜಾತಿಗಳ ಒಟ್ಟು ಜನಸಂಖ್ಯೆ 42.48 ಲಕ್ಷ . ಇದರಲ್ಲಿ ವಾಲ್ಮೀಕಿ ಸಮುದಾಯದ ಜನಸಂಖ್ಯೆ 32.96 ಲಕ್ಷ ಇದೆ. ಉಳಿದ 49 ಜಾತಿಗಳನ್ನು 9.52 ಲಕ್ಷ, ಆದಿಯನ್, ಬಾವ್ಚಾ, ಡುಂಗ್ರಿಗರಾಸಿಯಾ, ಚೆಂಚು, ಹಳಪಟ್ಟಿ ಗೌಡ್ಲು, ಕಣಿಯನ್, ಮಲೆಕುಡಿಯ, ಮಲೇರು, ಪಣಿಯನ್ - ಈ ಜಾತಿಗಳ ಕಡಿಮೆ . ಕೆಲವು ಮೂರಂಕೆ ಜನಸಂಖ್ಯೆಯ ಜಾತಿಗಳೂ ಇವೆ ಎಂದು ವಿವರಿಸಿದರು.
ಕೊರಗ, ಜೇನುಕುರುಬ ಜಾತಿಗಳನ್ನು ಅದರ ಸೂಕ್ಷ್ಮ್ಮತೆಯ ಕಾರಣಕ್ಕೆ ನೈಜ ದುರ್ಬಲ ಬುಡಕಟ್ಟು ಸಮುದಾಯ ಎಂದು ಗುರುತಿಸಲಾಗುತ್ತದೆ. ಯೆರವ, ಸೋಲಿಗ , ಸಿದ್ದಿ, ಮೇದಾರ, ಮರಾಟಿ ನಾಯ್ಕ, ಹಸಳ, ಹರಿಣಶಿಕಾರಿ ಈ ಜಾತಿಗಳಿಗೆ ಸ್ವಲ್ಪ ಸಂಖ್ಯಾಬಲ ಇದೆ. ಪರಿಶಿಷ್ಟ ಪಂಗಡಗಳ ನಡುವೆ ಒಳಮೀಸಲಾತಿಯ ಹಂಚಿಕೆ ಸಾಧ್ಯವಾದರೆ ಸಣ್ಣ, ಅತಿ ಸಣ್ಣ ಜಾತಿಗಳಿಗೂ ಅವರ ಪಾಲು ದಕ್ಕುತ್ತದೆ ಎಂದರು.
ಈಗಾಗಲೇ ಪರಿಶಿಷ್ಟ ಪಂಗಳಡಗಳ ಒಳಮೀಸಲಾತಿಗೆ ಸಂಬಂಧಿಸಿ ಒಂದರೆಡು ಸಭೆ ಆಗಿದೆ. ಮಂಗಳೂರಿನಲ್ಲಿ ನಡೆದ ಸಭೆಗೆ ಕೊಡಗು ಮತ್ತು ಉಡುಪಿಯವರು ಬಂದಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಭೆ ನಡೆಸಿ ಪರಿಶಿಷ್ಟ ಪಂಗಡದ ಎಲ್ಲ ಸಮುದಾಯದ ಅಭಿಪ್ರಾಯ ಪಡೆದು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ವಾದಿರಾಜ, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ. ಸುಂದರ ನಾಯ್ಕ, ನಿವೃತ್ತ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಸುಂದರ ನಾಯ್ಕ, ನಿವೃತ್ತ ಎಆರ್‌ಟಿಒ ವಿಶ್ವನಾಥ ನಾಯ್ಕ, ಲ್ಯಾಂಪ್ಸ್ ಮಹಾ ಮಂಡಲದ ಅಧ್ಯಕ್ಷ ಕಾವೇರ, ಮಾಜಿ ಅಧ್ಯಕ್ಷ ಮುತ್ತಪ್ಪ ಮೂಡಿಗೆರೆ, ಚಾಮರಾಜನಗರ ಸೋಲಿಗ ಸಮುದಾಯದ ನಾಯಕ ಮುದ್ದಯ್ಯ, ಕರ್ನಾಟಕ ಹೈಕೋರ್ಟ್ ನ್ಯಾಯವಾದಿ ಪ್ರವೀಣ್ ಕುಮಾರ್ ಮುಗುಳಿ ಉಪಸ್ಥಿತರಿದ್ದರು.







