ದನ ಮಾರಾಟ ಆರೋಪ: ಪೊಲೀಸರು ಮುಟ್ಟುಗೋಲು ಹಾಕಿದ್ದ ಮನೆ ಬಿಡುಗಡೆಗೆ ಪುತ್ತೂರು ಎಸಿ ಆದೇಶ

ಮನೆ ಮುಟ್ಟುಗೋಲು ತೆರವು ಮಾಡಲು ಸಿಪಿಐಎಂ ಮನವಿ ಸ್ವೀಕರಿಸಿದ ಬೆಳ್ತಂಗಡಿ ಉಪತಹಶೀಲ್ದಾರ್
ಬೆಳ್ತಂಗಡಿ: ಕಸಾಯಿಖಾನೆಗೆ ಸಾಗಾಟ ಮಾಡುವವರಿಗೆ ಜಾನುವಾರುಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿದ್ದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಝೊಹರಾ ಎಂಬವರ ಮನೆಯನ್ನು ಬಿಡುಗಡೆ ಮಾಡಿ ಪುತ್ತೂರು ಸಹಾಯಕ ಆಯಕ್ತರು ಆದೇಶಿಸಿದ್ದಾರೆ ಎಂದು ಬೆಳ್ತಂಗಡಿ ತಾಲೂಕು ಸಿಪಿಎಂ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ತಿಳಿಸಿದ್ದಾರೆ.
ಜಾನುವಾರುಗಳನ್ನು ಮಾರಾಟ ಮಾಡಿದ್ದಕ್ಕೆ ಮನೆ ಮುಟ್ಟುಗೋಲು ಹಾಕಿರುವ ಪೊಲೀಸರ ಕ್ರಮವನ್ನು ಪ್ರಶ್ನಿಸಿ ನ್ಯಾಯವಾದಿ ಬಿ.ಎಂ.ಭಟ್ ಅವರು ಪುತ್ತೂರು ಎಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪ್ರಕರಣವನ್ನು ಪರಿಶೀಲಿಸಿದ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಪೊಲೀಸರು ಮುಟ್ಟುಗೋಲು ಹಾಕಿದ್ದ ಮನೆಯನ್ನು ಬಿಡುಗಡೆ ಮಾಡಿ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ನ.4ರಂದು ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದರು. ಈ ಬಗ್ಗೆ ಜಾನುವಾರು ಸಾಗಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು, ಇವರಿಗೆ ದನ ಮಾರಾಟ ಮಾಡಿದ್ದ ಪಟ್ಟೂರು ನಿವಾಸಿ ಝೊಹರಾ ವಿರುದ್ಧವೂ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಮುಂದುವರಿಸಿದ ಧರ್ಮಸ್ಥಳ ಪೊಲೀಸರು ಆರಂಭದಲ್ಲಿ ದನ ಸಾಗಾಟ ಮಾಡಿದ ವ್ಯಕ್ತಿಯ ಮನೆಯಲ್ಲೇ ಕಸಾಯಿಖಾನೆ ನಡೆಯುತ್ತಿದೆ ಎಂದು ಆರೋಪಿಸಿ ಝೊಹರಾರ ಮನೆಯನ್ನು ಜಪ್ತಿ ಮಾಡಿದ್ದರು.
ಮುಂದುವರಿದ ಪೊಲೀಸರು ನ.6ರಂದು ಝೊಹಾರರ ಮನೆಗೆ ತೆರಳಿ ಅವರ ತಾಯಿ ಸಾರಮ್ಮರಿಗೆ ನೋಟಿಸ್ ನೀಡಿ ಯಾವುದೇ ಸ್ಪಷ್ಟೀಕರಣ ನೀಡಲು ಅವಕಾಶವೂ ಕಲ್ಪಿಸದೆ ಅಂದೇ ಅವರ ಮನೆಯನ್ನು ಮುಟ್ಟುಗೋಲು ಹಾಕಿದ್ದರು. ಇದರಿಂದ ಈ ಮನೆಯಲ್ಲಿ ವಾಸಿಸುತ್ತಿದ್ದ ಶಾಲೆಗೆ ಹೋಗುವ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೂವರು ಮಕ್ಕಳು ಹಾಗೂ ಇಡೀ ಕುಟುಂಬ ಬೀದಿಗೆ ಬಿದ್ದಂತಾಗಿತ್ತು.
ಈ ಬಗ್ಗೆ ಶುಕ್ರವಾರ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ಬಿ.ಎಂ.ಭಟ್, ಕಾನೂನುಬಾಹಿರವಾಗಿ ಝೊಹರಾ ಅವರ ಮನೆ ಮುಟ್ಟುಗೋಲು ಹಾಕಲಾಗಿದೆ ಎಂದು ದೂರಿದ್ದರು.
ಈ ಬಗ್ಗೆ ಬಳಿಕ ಪುತ್ತೂರು ಸಹಾಯಕ ಆಯಕ್ತರಿಗೂ ಬಿ.ಎಂ.ಭಟ್ ಮನವಿ ಸಲ್ಲಿಸಿದ್ದರು. ಪ್ರಕರಣವನ್ನು ಪರಿಶೀಲಿಸಿದ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಪೊಲೀಸರು ಮುಟ್ಟುಗೋಲು ಹಾಕಿದ್ದ ಮನೆಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಬಿ.ಎಂ.ಭಟ್ ಮಾಹಿತಿ ನೀಡಿದ್ದಾರೆ.
ಝೊಹರಾ ಕುಟುಂಬವು ಹೈನುಗಾರಿಕೆ ಮಾಡುತ್ತಿದ್ದಾರೆ. ಇವರು ತಮ್ಮ ಬಳಿಯಿದ್ದ ಒಂದು ದನ ಹಾಗೂ ಎರಡು ಕರುಗಳನ್ನು ಮಾರಾಟ ಮಾಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ದನ ಮಾರಾಟ ಅಪರಾಧವಾದರೆ ರೈತರ ಜಮೀನುಗಳನ್ನು ಮುಟ್ಟುಗೋಲು ಹಾಕಬೇಕಾದೀತು: ಬಿ.ಎಂ.ಭಟ್
ಹಾಲು ಉತ್ಪಾದಕರು ಕೃಷಿಕರು ಜಾನುವಾರುಗಳನ್ನು ಖರೀದಿಸುವುದು ಮಾರಾಟ ಮಾಡುವುದು ಸಾಮಾನ್ಯ ವಿಚಾರವಾಗಿದೆ. ಖರೀದಿಸಿದವರು ಅದನ್ನು ಕಾನೂನುಬಾಹಿರ ಕೆಲಸಗಳಿಗೆ ಉಪಯೋಗಿಸುತ್ತಾರೋ ಎಂಬುದು ಮಾರಿದವರಿಗೆ ತಿಳಿಯಲು ಸಾಧ್ಯವಿಲ್ಲ. ಹೀಗಿರುವಾಗ ದನವನ್ನು ಮಾರಿದರು ಎಂಬ ಕಾರಣಕ್ಕೆ ಮಕ್ಕಳೊಂದಿಗೆ ವಾಸವಿರುವ ಮಹಿಳೆಯ ಮನೆಯನ್ನು ಸೂಕ್ತ ನೋಟಿಸ್ ಕೂಡಾ ನೀಡದೆ ಮುಟ್ಟುಗೋಲು ಹಾಕಿರುವುದು ಕಾನೂನುಬಾಹಿರ ಎಂದು ಸಿಪಿಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಬಿ.ಎಂ. ಭಟ್ ಹೇಳಿದ್ದಾರೆ.
ಪ್ರಕರಣದಲ್ಲಿ ಝೊಹರಾ ದನವನ್ನು ಮಾರಿರುವುದು ಮಾತ್ರ. ದನದ ಹತ್ಯೆ ಝೊಹರಾರಿಗೆ ಸೇರಿರುವ ಜಾಗದಲ್ಲಿ ನಡೆದಿರುವ ಬಗ್ಗೆ ಎಫ್ಐಆರ್ನಲ್ಲಿ ಮಾಹಿತಿ ಇಲ್ಲ. ದನವನ್ನು ಮಾರಾಟ ಮಾಡುವುದೇ ಸ್ಥಳವನ್ನು ಜಪ್ತಿ ಮಾಡುವಂತಹ ಅಪರಾಧವಾದರೆ ರೈತರ ಜಮೀನುಗಳನ್ನು ಮುಟ್ಟುಗೋಲು ಹಾಕಬೇಕಾಗುತ್ತದೆ ಎಂದು ಪೊಲೀಸರ ಕ್ರಮದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ನ.6ರಂದೇ ನೋಟಿಸ್ ನೀಡಿ ಕನಿಷ್ಠ ಸ್ಪಷ್ಟನೆ ನೀಡಲು ಸಮಯಾವಕಾಶ ನೀಡದೆ ಅದೇ ದಿನ ವಾಸದ ಮನೆಯನ್ನು ಮುಟ್ಟುಗೋಲು ಹಾಕುವ ಕಾರ್ಯವನ್ನು ಪೊಲೀಸರು ಮಾಡಿದ್ದಾರೆ. ಪೊಲೀಸರ ಈ ಕ್ರಮ ಸರಿಯಾದುದಲ್ಲ. ಈ ಬಗ್ಗೆ ಪುತ್ತೂರು ಎ.ಸಿ. ಆದೇಶದಿಂದ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಿದಂತಾಗಿದೆ ಎಂದು ಬಿ.ಎಂ.ಭಟ್ ಹೇಳಿದ್ದಾರೆ.







