ಪುತ್ತೂರು: ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಅವಧಿ ಮೀರಿ ಧ್ವನಿವರ್ಧಕ ಬಳಕೆ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪ; ಪ್ರಕರಣ ದಾಖಲು

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ. 17ರಂದು ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆಯ ವೇಳೆ ಕಾನೂನು ಮೀರಿ ಧ್ವನಿವರ್ಧಕ ಬಳಕೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಉಪನಿರೀಕ್ಷಕರ ದೂರಿನ ಪ್ರಕಾರ, ಶೋಭಾಯಾತ್ರೆಗೆ ಧ್ವನಿವರ್ಧಕ ಬಳಕೆಗೆ ರಾತ್ರಿ 10 ಗಂಟೆಯವರೆಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಮೆರವಣಿಗೆಯಲ್ಲಿ ಹಲವು ಸ್ತಬ್ಧಚಿತ್ರಗಳಿದ್ದು, ನಿಗದಿತ ಸಮಯದ ಬಳಿಕ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿದ್ದ `ಪಂಚಮುಖಿ ಫ್ರೆಂಡ್ಸ್' ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಅದರಂತೆ ಧ್ವನಿವರ್ಧಕವನ್ನು ಬಂದ್ ಮಾಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಂಬಂಧಪಡದ ಅಜಿತ್ ರೈ ಹೊಸಮನೆ ಹಾಗೂ ಇತರರು ಸ್ಥಳಕ್ಕೆ ಆಗಮಿಸಿ ಧ್ವನಿವರ್ಧಕವನ್ನು ಬಂದ್ ಮಾಡಬಾರದು ಎಂದು ಹೇಳಿ, ಪುನಃ ಧ್ವನಿವರ್ಧಕ ಬಳಸುವಂತೆ ಸ್ತಬ್ದಚಿತ್ರದ ಆಯೋಜಕರಿಗೆ ಸೂಚಿಸಿದ್ದಾರೆ. ಬಳಿಕ ಧ್ವನಿವರ್ಧಕವನ್ನು ಪುನಃ ಬಳಸಲಾಗಿದ್ದು, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಅದನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರೂ ಸೂಚನೆಯನ್ನು ಪಾಲಿಸದೆ, ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಕಾರ್ಯಕ್ರಮ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ತಿಳುವಳಿಕೆ ನೀಡಿದರೂ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರಿನಲ್ಲಿ ಕೋರಲಾಗಿದೆ. ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯು ಬಳಿಕ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






