ಪುತ್ತೂರು | ಬಸ್ ಪಾಸ್ ಸಮಸ್ಯೆ ಬಗೆಹರಿಸದಿದ್ದರೆ ತೀವ್ರ ಹೋರಾಟ: ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಎಚ್ಚರಿಕೆ

ಪುತ್ತೂರು: ಧರ್ಮಸ್ಥಳ - ಬೆಳ್ತಂಗಡಿ - ಉಪ್ಪಿನಂಗಡಿ ಮಾರ್ಗದಿಂದ ಪುತ್ತೂರಿನ ನೆಹರುನಗರ ಮಾರ್ಗವಾಗಿ ಕಾಲೇಜುಗಳಿಗೆ ಪ್ರತಿದಿನ ಸಂಚರಿಸುವ ವಿದ್ಯಾರ್ಥಿಗಳ ಬಸ್ ಪಾಸ್ ಹಾಗೂ ಪ್ರಯಾಣದ ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ, ಕೆಎಸ್ಆರ್ಟಿಸಿ (KSRTC) ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆ ಮತ್ತು ಹೋರಾಟ ನಡೆಸಲಾಗುವುದು ಎಂದು ಬೆಳ್ತಂಗಡಿ ರೂಟ್ನ ಸಂತ್ರಸ್ತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಧರ್ಮಸ್ಥಳ - ಉಪ್ಪಿನಂಗಡಿ - ಪುತ್ತೂರು ಮಾರ್ಗವಾಗಿ ಬರುವ ವಿದ್ಯಾರ್ಥಿಗಳಿಗೆ 2023ರವರೆಗೆ ಪುತ್ತೂರು ಬಸ್ ನಿಲ್ದಾಣದವರೆಗೆ ಬಂದು ನೆಹರುನಗರ ಮಾರ್ಗವಾಗಿ ಕಾಲೇಜಿಗೆ ತೆರಳಲು ಅವಕಾಶವಿತ್ತು. ಆದರೆ 2024ರಿಂದ ಮಾರ್ಗ ಬದಲಾವಣೆ ಸ್ಥಳವನ್ನು ಕೇವಲ ಬೋಳುವಾರಿಗೆ ಸೀಮಿತಗೊಳಿಸಲಾಗಿದೆ. ಬೋಳುವಾರಿನಲ್ಲಿ ಬಸ್ಗಳು ಈಗಾಗಲೇ ಕಿಕ್ಕಿರಿದು ತುಂಬಿ ಬರುವುದರಿಂದ ವಿದ್ಯಾರ್ಥಿಗಳಿಗೆ ಬಸ್ ಹತ್ತುವುದೇ ಕಷ್ಟವಾಗಿದ್ದು, ಪ್ರತಿದಿನ ಬಾಗಿಲಲ್ಲಿ ನೇತಾಡುತ್ತಾ, ಫುಟ್ಬೋರ್ಡ್ನಲ್ಲಿ ಪ್ರಾಣಾಪಾಯದ ನಡುವೆಯೇ ಪ್ರಯಾಣಿಸುವ ದುಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ, ಮುಖ್ಯಮಂತ್ರಿಗಳ ಉಚಿತ ಬಸ್ ಪಾಸ್ ಸೌಲಭ್ಯವಿದ್ದರೂ ಸಹ, ಪುತ್ತೂರು ಬಸ್ ನಿಲ್ದಾಣದವರೆಗೆ ಪ್ರಯಾಣಿಸಲು ಕಂಡಕ್ಟರ್ಗಳು ಟಿಕೆಟ್ ನೀಡದೆ ಬಲವಂತವಾಗಿ 5 - 6 ರೂ. ವಸೂಲಿ ಮಾಡುತ್ತಿದ್ದಾರೆ ಹಾಗೂ ಹಣ ನೀಡದಿದ್ದರೆ ಬಸ್ಸಿನಿಂದ ಕೆಳಗಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಸಮಸ್ಯೆಯ ಕುರಿತು ಈಗಾಗಲೇ 21/10/2024 ರಂದು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು ಹಾಗೂ ನ.16 ರಂದು ಪುತ್ತೂರು ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕರು ಮತ್ತು ಶಾಸಕರಿಗೆ ಮತ್ತೊಮ್ಮೆ ಲಿಖಿತ ಮನವಿ ನೀಡಲಾಗಿದೆ. ಆದರೂ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರ ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಆದ್ದರಿಂದ, ತಕ್ಷಣವೇ ಬೆಳ್ತಂಗಡಿ - ಪುತ್ತೂರು ವಿದ್ಯಾರ್ಥಿ ಪಾಸ್ಗಳನ್ನು ಪುತ್ತೂರು ಬಸ್ ನಿಲ್ದಾಣದವರೆಗೆ ವಿಸ್ತರಿಸಬೇಕು ಅಥವಾ ಬೋಳುವಾರು ಪ್ರದೇಶದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು; ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸುವುದಾಗಿ ವಿದ್ಯಾರ್ಥಿ ಪ್ರತಿನಿಧಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






