ದ.ಕ. ಜಿಲ್ಲೆಯಲ್ಲಿ ಮಳೆ | ಬೆಳ್ತಂಗಡಿಯಲ್ಲಿ ಸಿಡಿಲು ಬಡಿದು ಮರ ಛಿದ್ರ

ಮಂಗಳೂರು ,ಡಿ.3: ದಿತ್ವಾ ಚಂಡಮಾರುತ ಪರಿಣಾಮವಾಗಿ ಕರಾವಳಿಯಲ್ಲಿ ಮಳೆಯಾಗಿದ್ದು, ದ.ಕ. ಜಿಲ್ಲೆಯಾದ್ಯಂತ ಬುಧವಾರ ಸಂಜೆ ಹೊತ್ತಿಗೆ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಗಾಳಿಯೊಂದಿಗೆ ಮಳೆಯಾಗಿದ್ದು, ಬೆಳ್ತಂಗಡಿಯ ಪಡಂಗಡಿ ಗ್ರಾಮದ ಮಲ್ಲಜೆ ಎಂಬಲ್ಲಿ ಸಂಜೆ 5:30ರ ಹೊತ್ತಿಗೆ ಅಕೇಶಿಯಾ ಮರವೊಂದಕ್ಕೆ ಸಿಡಿಲು ಬಡಿದು, ಮರ ಛಿದ್ರಗೊಂಡಿದೆ.
ಸಿಡಿಲಿನ ಹೊಡೆತಕ್ಕೆ ಮರದ ಕೆಳಗಿನ ಮಣ್ಣನ್ನು ಅಗೆದು ಹಾಕಿದಂತಾಗಿದೆ. ಇನ್ನೆರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ .
ಬುಧವಾರ ಬೆಳಗ್ಗೆಯಿಂದಲ್ಲೇ ಮೋಡಕವಿದ ವಾತಾವರಣ ಇದೆ. ಮಧ್ಯಾಹ್ನದ ಬಳಿಕ ಹಲವಡೆ ಸಾಧಾರಣ ಮಳೆಯಾಗಿದೆ. ಮಂಗಳೂರು ನಗರ ಭಾಗದಲ್ಲಿ ಸಂಜೆಯಾಗುತ್ತಿದ್ದಂತೆ ಉತ್ತಮ ಮಳೆ ಕಾಣಿಸಿಕೊಂಡಿದೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನ ಬಳಿಕ ಮಳೆ ಸುರಿದಿದ್ದು, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಮೂಡುಬಿದಿರೆ, ಸುರತ್ಕಲ್ ಭಾಗದಲ್ಲಿ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸಿಡಿಲಿನಿಂದ ಹಾನಿ ಸಂಭವಿಸಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಮಳೆ ಹೆಚ್ಚಿರುವ ಮುನ್ಸೂಚನೆ ಇದೆ. ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಉತ್ತರಕ್ಕೆ ಚಲಿಸುವ ಸಾಧ್ಯತೆಗಳಿರುವುದರಿಂದ ಕರಾವಳಿಯಲ್ಲಿ ಡಿ.5ರ ತನಕವೂ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಕಡಲು ಬಹಳಷ್ಟು ಪ್ರಕ್ಷುಬ್ದದಿಂದ ಕೂಡಿದ್ದು, ಜಿಲ್ಲೆಯ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚನೆ ನೀಡಿದೆ.







