ಡಾಲಿ ಚಾಯ್ ವಾಲಾ ಮಂಗಳೂರಿನವರಾಗಿದ್ರೆ ಅವರ ಅಂಗಡಿ ಕೂಡ ಧ್ವಂಸ ಮಾಡಲಾಗುತ್ತಿತ್ತು : ರಾಜ್ ಬಿ ಶೆಟ್ಟಿ
ಬೀದಿ ಬದಿ ವ್ಯಾಪಾರಿಗಳ ಪರ ಧ್ವನಿ ಎತ್ತಿದ ನಟ

ರಾಜ್ ಬಿ ಶೆಟ್ಟಿ (Photo:X/@RajbShettyOMK)
ಮಂಗಳೂರು: ಲಾಲ್ ಬಾಗ್ ಸ್ಟ್ರೀಟ್ ಪುಡ್ ಫೆಸ್ಟ್ ಗೆ ಬೀದಿ ಬದಿ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ. ಆದರೆ, ಡಾಲಿ ಮಂಗಳೂರಿನವನಲ್ಲ ಎಂಬುವುದು ಸಂತೋಷದ ವಿಷಯ. ಒಂದು ವೇಳೆ ಅವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿತ್ತು ಎಂದು ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಬಿಜೆಪಿ ಆಡಳಿತದ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 'ಟೈಗರ್ ಕಾರ್ಯಾಚರಣೆ' ನಡೆಸಿ ಬೀದಿ ಬದಿಯಲ್ಲಿ ಟೀ, ಕಾಫಿ, ಚುರುಮುರಿ, ಆಮ್ಲೆಟ್ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಬಿಜೆಪಿ ಶಾಸಕರು, ಬಿಜೆಪಿ ಪಾಲಿಕೆ ಸದಸ್ಯರು, ಬಿಜೆಪಿ ಮೇಯರ್ ಟ್ರಾಫಿಕ್ ಕಿರಿಕಿರಿ, ಪಾರ್ಕಿಂಗ್ ಸಮಸ್ಯೆ ಫುಟ್ ಪಾತ್ ಅತಿಕ್ರಮಣ ತೆರವು ಎಂಬ ನೆಪಗಳನ್ನು ನೀಡಿ ಜನಸಾಮಾನ್ಯರ ಆದಾಯದ ಮೂಲವಾಗಿದ್ದ ಗೂಡಂಗಡಿಗಳನ್ನು ತೆರವು ಗೊಳಿಸಿದ್ದರು. ಬೀದಿ ಬದಿ ವ್ಯಾಪರಿಗಳ ವಿರುದ್ಧದ ಈ ದಬ್ಬಾಳಿಕೆಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದ್ದವು.
ಲಾಲ್ ಬಾಗ್ ಸ್ಟ್ರೀಟ್ ಪುಡ್ ಫೆಸ್ಟ್ ಗೆ ಬೀದಿ ಬದಿ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರನ್ನು ಅತಿಥಿಯಾಗಿ ಆಹ್ವಾನಿಸಿರುವ ಬೆನ್ನಲ್ಲೇ ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಇನ್ಸ್ಟ್ರಾಗ್ರಾಂ ನಲ್ಲಿ ಮಾಡಿರುವ ಪೋಸ್ಟ್ ವೊಂದು ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಸಿದ ದಬ್ಬಾಳಿಕೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ನಿರ್ದೇಶಕ ರಾಜ್ ಬಿ ಶೆಟ್ಟಿ ಇನ್ಸ್ಟ್ರಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದು, ʼಬೀದಿ ಬದಿ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರನ್ನು ಮಂಗಳೂರಿಗೆ ಕರೆಸಿ ಸಂಭ್ರಮಿಸಲಾಯಿತು. ಇದೇ ನಗರದಲ್ಲಿ ಕೆಲ ತಿಂಗಳ ಹಿಂದೆ ಬುಲ್ಡೋಝರ್ ಕಾರ್ಯಾಚರಣೆಯ ಮೂಲಕ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಲಾಯಿತು. ಡಾಲಿ ಮಂಗಳೂರಿನವನಲ್ಲ ಎಂಬುವುದು ಸಂತೋಷದ ವಿಷಯ. ಒಂದು ವೇಳೆ ಅವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿತ್ತುʼ ಎಂದು ಬರೆದಿದ್ದಾರೆ.







