ಸೌಜನ್ಯ ಪ್ರಕರಣ ಮರುತನಿಖೆ | ಹಿರಿಯ ಅಧಿಕಾರಿಗಳ ಎಲ್ಲಾ ಸೂಚನೆಗಳು ಲಿಖಿತ ರೂಪದಲ್ಲೇ ಇರಲಿ: SIT ಮುಖ್ಯಸ್ಥರಿಗೆ ಸೌಜನ್ಯ ತಾಯಿ ಪರ ವಕೀಲರ ಪತ್ರ

ಸೌಜನ್ಯ - ಕುಸುಮಾವತಿ ಗೌಡ
ಮಂಗಳೂರು: ಬೆಳ್ತಂಗಡಿ ಪೊಲೀಸ್ ಠಾಣೆಯ ಕ್ರೈಂ ನಂಬರ್ 250/2012ರ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡಕ್ಕೆ (SIT) ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರ ಪರ ಸುಪ್ರೀಂ ಕೋರ್ಟ್ ವಕೀಲ ಅಶುತೋಷ್ ದುಬೆ ಅವರು ಮಹತ್ವದ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಹೊಸದಾಗಿ ಆರಂಭವಾಗುತ್ತಿರುವ ತನಿಖೆಯ (De-novo investigation) ಹಾದಿಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ಅಧಿಕಾರಿಗಳು ನೀಡುವ ಯಾವುದೇ ನಿರ್ದೇಶನ, ಸಲಹೆ ಅಥವಾ ಮಾರ್ಗದರ್ಶನಗಳು ಕಡ್ಡಾಯವಾಗಿ ಲಿಖಿತ ರೂಪದಲ್ಲೇ ಇರಬೇಕು ಮತ್ತು ಅವುಗಳನ್ನು ಅಧಿಕೃತ ಕಡತಗಳಲ್ಲಿ ಭದ್ರವಾಗಿ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಹಿಂದೆ ಬೆಳ್ತಂಗಡಿ ಪೊಲೀಸರು, ಸಿಐಡಿ ಹಾಗೂ ಸಿಬಿಐ ನಡೆಸಿದ ತನಿಖಾ ವೈಖರಿಯು "ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ" ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೆ ಅಸಲಿ ಆರೋಪಿಗಳು ಹಿಂದಿನ ತನಿಖೆಯನ್ನು ಹಳಿ ತಪ್ಪಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಹಿಂದೆ ತನಿಖೆಯಲ್ಲಿ ಭಾಗಿಯಾಗಿದ್ದ ಯಾವುದೇ ಅಧಿಕಾರಿಗಳಿಲ್ಲದ ಸಂಪೂರ್ಣ ಹೊಸ SIT ತಂಡದಿಂದ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.
ಹಿಂದಿನ ತನಿಖೆಯ ವೇಳೆ ನಡೆದ ಹಲವು ಲೋಪಗಳನ್ನು ಪತ್ರದಲ್ಲಿ ವಕೀಲರು ಪ್ರಸ್ತಾಪಿಸಿದ್ದಾರೆ.
ಅಂದಿನ ಪಿಎಸ್ಐ ಹಾಗೂ ಆರಂಭಿಕ ತನಿಖಾಧಿಕಾರಿಗಳಲ್ಲಿ ಒಬ್ಬರಾಗಿದ್ದ ಯೋಗೇಶ್ ಕುಮಾರ್ (PW-25) ಅವರ ಸಾಕ್ಷ್ಯವು ತನಿಖೆಯಲ್ಲಾದ ಗಂಭೀರ ಲೋಪಗಳನ್ನು ಬಹಿರಂಗಪಡಿಸಿದೆ ಎಂದು ಪತ್ರದಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ.
ಶವಪರೀಕ್ಷೆಯ ಸಮಯದಲ್ಲಿ ವೈದ್ಯರಿಗೆ ವಿಸೆರಾ (ಆಂತರಿಕ ಅಂಗಾಂಗ) ಸಂಗ್ರಹಿಸಿ ಸಂರಕ್ಷಿಸಲು ಕೋರದಿರುವ ಬಗ್ಗೆ ವಿವರಣೆ ನೀಡಿದ್ದ ಯೋಗೇಶ್ ಕುಮಾರ್, ಕುತ್ತಿಗೆಯ ಮೇಲೆ ಹಗ್ಗದ ಗುರುತು ಕಂಡುಬಂದಿದ್ದರಿಂದ ಮತ್ತು ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ಭಾವಿಸಲಾಗಿದ್ದರಿಂದ ವಿಸೆರಾ ಸಂರಕ್ಷಿಸದಿರಲು "ಹಿರಿಯ ಅಧಿಕಾರಿಗಳೊಂದಿಗಿನ ಚರ್ಚೆಯಲ್ಲಿ" ನಿರ್ಧರಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದರು.
ಮೃತದೇಹದ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರವಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದರೂ, ವಿಸೆರಾ ಹಾಗೂ ಆ ಆಹಾರ ಪದಾರ್ಥಗಳನ್ನು ಸಂರಕ್ಷಿಸುವಂತೆ ವೈದ್ಯರಿಗೆ ಯಾವುದೇ ಲಿಖಿತ ಕೋರಿಕೆಯನ್ನು ಸಲ್ಲಿಸಿರಲಿಲ್ಲ. ಫೊರೆನ್ಸಿಕ್ ದೃಷ್ಟಿಯಿಂದ ಅತ್ಯಂತ ಮಹತ್ವದ ನಿರ್ಧಾರವನ್ನು ಕೇವಲ ಹಿರಿಯ ಅಧಿಕಾರಿಗಳೊಂದಿಗಿನ ಚರ್ಚೆ ಎಂದು ಹೇಳಲಾಗಿದೆಯೇ ಹೊರತು, ಆ ನಿರ್ಧಾರದಲ್ಲಿ ಯಾರೆಲ್ಲ ಭಾಗವಹಿಸಿದ್ದರು, ನಿಖರವಾಗಿ ಏನು ಸಲಹೆ ನೀಡಲಾಯಿತು ಮತ್ತು ಅಂತಹ ಮಹತ್ವದ ಸಾಕ್ಷ್ಯ ಸಂಗ್ರಹವನ್ನು ಕೈಬಿಡಲು ನೀಡಲಾದ ಕಾರಣಗಳೇನು ಎಂಬ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲ ಎಂದು ಪತ್ರದಲ್ಲಿ ಬೆಟ್ಟುಮಾಡಲಾಗಿದೆ.
ಇದಲ್ಲದೆ, ಮೃತ ಯುವತಿಯ ಒಳಉಡುಪನ್ನು ಆಕೆಯ ಮನೆಯವರಿಂದ ತರಿಸಿಕೊಂಡ ಸಂದರ್ಭವನ್ನು ವಿವರಿಸುತ್ತಾ ಯೋಗೇಶ್ ಕುಮಾರ್ ಅವರು, "ನಮ್ಮ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ, ಮೃತಳು ಯಾವ ರೀತಿಯ ಒಳಉಡುಪು ಧರಿಸುತ್ತಿದ್ದಳು ಎಂದು ನಾನು ಶ್ರೀ ವಿಠಲ ಗೌಡ ಅವರ ಬಳಿ ಕೇಳಿದೆ" ಎಂದು ಸಾಕ್ಷ್ಯ ನುಡಿದಿದ್ದರು. ನಂತರ ಆಕೆಯ ಮನೆಯಿಂದ ಒಳಉಡುಪನ್ನು ತರಲಾಗಿತ್ತು ಮತ್ತು ಅದನ್ನು ಮರಳಿ ವಾಪಸ್ ನೀಡುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಲಾಗಿತ್ತು ಎಂದೂ ಅವರು ಹೇಳಿಕೆ ನೀಡಿದ್ದರು. ಈ ಮೂಲಕ ಯಾವುದೇ ಲಿಖಿತ ದಾಖಲೆಗಳಿಲ್ಲದೆ ಕೇವಲ "ಹಿರಿಯ ಅಧಿಕಾರಿಗಳ ಸೂಚನೆ" ಹಾಗೂ "ಚರ್ಚೆ"ಯ ನೆಪದಲ್ಲಿ ತನಿಖಾ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು ಎಂಬುದನ್ನು ಅವರ ಸಾಕ್ಷ್ಯವು ಸ್ಪಷ್ಟವಾಗಿ ಎತ್ತಿಹಿಡಿದಿದೆ ಎಂದು ಉಲ್ಲೇಖಿಸಲಾಗಿದೆ.
ಶವಪರೀಕ್ಷೆ ನಡೆಸಿದ ವೈದ್ಯೆ ಡಾ. ರಶ್ಮಿ (ಸಾಕ್ಷಿ ಪಿಡಬ್ಲ್ಯೂ-34), "ನಾವು ಒತ್ತಡದಲ್ಲಿ ಶವಪರೀಕ್ಷೆ ನಡೆಸಿದ್ದು ನಿಜ" ಎಂದು ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿದಿದ್ದರು ಎಂಬುದನ್ನೂ ವಕೀಲರು SIT ಗೆ ಬರೆದ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಿಂದಿನ ವಿಚಾರಣೆಯಲ್ಲಿ "ಒತ್ತಡದಲ್ಲಿ", "ಹಿರಿಯ ಅಧಿಕಾರಿಗಳ ಸೂಚನೆ", "ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ" ಎಂಬ ಮಾತುಗಳು ಬಂದಿವೆಯೇ ಹೊರತು, ಆ ಆದೇಶಗಳನ್ನು ಯಾರು ನೀಡಿದರು, ಏಕೆ ನೀಡಿದರು ಮತ್ತು ಅವು ಮೌಖಿಕವೋ ಅಥವಾ ಲಿಖಿತವೋ ಎಂಬುದು ಸ್ಪಷ್ಟವಾಗಿಲ್ಲ. ಈ ಅಸ್ಪಷ್ಟತೆ ಹೊಸ ತನಿಖೆಯಲ್ಲಿ ಮರುಕಳಿಸಬಾರದು ಎಂದು ವಕೀಲರು ಆಗ್ರಹಿಸಿದ್ದಾರೆ.
SIT ಗೆ ಸಲ್ಲಿಸಲಾದ ಮುಖ್ಯ ಬೇಡಿಕೆಗಳು
ಡಿಜಿ-ಐಜಿಪಿ, ಗೃಹ ಇಲಾಖೆ, ಉನ್ನತ ಪೊಲೀಸ್ ಅಧಿಕಾರಿಗಳು ಅಥವಾ ತನಿಖಾ ತಂಡದ ಹೊರಗಿನ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಬರುವ ಎಲ್ಲಾ ಸೂಚನೆಗಳು ಮತ್ತು ನಿರ್ದೇಶನಗಳು ಲಿಖಿತ ರೂಪದಲ್ಲೇ ಇರಬೇಕು ಹಾಗೂ ಅಧಿಕೃತ ದಾಖಲೆಯಲ್ಲಿರಬೇಕು. ತುರ್ತು ಸಂದರ್ಭದಲ್ಲಿ ಮೌಖಿಕವಾಗಿ ಸೂಚನೆ ನೀಡಿದರೆ, ತಕ್ಷಣವೇ ಅದನ್ನು ನೀಡಿದವರ ಹೆಸರು, ಹುದ್ದೆ, ದಿನಾಂಕ ಮತ್ತು ಸಮಯದ ವಿವರಗಳೊಂದಿಗೆ ಲಿಖಿತ ರೂಪಕ್ಕೆ ತಂದು ದಾಖಲಿಸಬೇಕು ಎಂದು ಸೌಜನ್ಯ ತಾಯಿ ಪರ ವಕೀಲರು ಬೇಡಿಕೆ ಇಟ್ಟಿದ್ದಾರೆ.
ಅಡ್ವೊಕೇಟ್ ಜನರಲ್, ಹೆಚ್ಚುವರಿ ಅಡ್ವೊಕೇಟ್ ಜನರಲ್, ಸರ್ಕಾರಿ ಅಭಿಯೋಜಕರು ಅಥವಾ ಯಾವುದೇ ಸರ್ಕಾರಿ ವಕೀಲರಿಂದ ಪಡೆಯುವ ಅಭಿಪ್ರಾಯ, ಸಲಹೆ ಹಾಗೂ ಅವರಿಗೆ ಕೇಳಲಾದ ಪ್ರಶ್ನೆಗಳೂ ಕಡ್ಡಾಯವಾಗಿ ಲಿಖಿತ ರೂಪದಲ್ಲಿ ದಾಖಲಾಗಿರಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.
SIT ಯ ತನಿಖಾಧಿಕಾರಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹಾಗೂ ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲದೆ ಪಾರದರ್ಶಕ ಮತ್ತು ವೈಜ್ಞಾನಿಕವಾಗಿ ಸತ್ಯವನ್ನು ಹೊರತರಲು ಆಂತರಿಕ ನಿಯಮಾವಳಿಗಳನ್ನು ರೂಪಿಸಿ ಎಲ್ಲಾ SIT ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಆದೇಶ ನೀಡುವಂತೆ ಕೋರಲಾಗಿದೆ.
ಈ ಪತ್ರದ ಪ್ರತಿಯನ್ನು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ವಿಶೇಷ ಕಾರ್ಯದರ್ಶಿ ಹಾಗೂ ರಾಜ್ಯ ಡಿಜಿ-ಐಜಿಪಿ ಕಚೇರಿಗೂ ಸೂಕ್ತ ಕ್ರಮಕ್ಕಾಗಿ ರವಾನಿಸಲಾಗಿದೆ.






