ಪರವಾನಿಗೆ ಹೆಚ್ಚಾದಲ್ಲಿ ಎರಡು ತಿಂಗಳಲ್ಲಿ ಕೆಂಪುಕಲ್ಲು ದರ ಇಳಿಕೆ: ದ.ಕ. ಜಿಲ್ಲಾ ಕೆಂಪುಕಲ್ಲು ಪಾಯ ಒಕ್ಕೂಟ

ಮಂಗಳೂರು, ನ.19: ರಾಜ್ಯ ಸರಕಾರ ಈಗಾಗಲೇ ರಾಜಧನ ಇಳಿಕೆ ಮಾಡಿದ್ದರಿಂದ ಕೆಂಪು ಕಲ್ಲಿನ ದರ ಇಳಿಕೆಯ ಹಾದಿಯಲ್ಲಿದೆ. ಕೆಂಪು ಕಲ್ಲು ಗಣಿಗಾರಿಕೆಗೆ ಇನ್ನಷ್ಟು ಪರವಾನಿಗೆಗಳು ಲಭ್ಯವಾದಂತೆ ಮುಂದಿನ ಎರಡು ತಿಂಗಳಲ್ಲಿ ದರವೂ ಇಳಿಕೆಯಾಗಲಿದೆ ಎಂದು ದ.ಕ. ಜಿಲ್ಲಾ ಕೆಂಪು ಕಲ್ಲು ಪಾಯಗಳ ಮಾಲಕರ ಒಕ್ಕೂಟ ತಿಳಿಸಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸತೀಶ್ ಆಚಾರ್ಯ, ಹಿಂದೆ 242ರಷ್ಟು ಕೆಂಪುಕಲ್ಲು ಪಾಯಗಳಿಗೆ ಪರವಾನಿಗೆ ಇದ್ದು, ಇಷ್ಟೊಂದು ನಿಯಮಗಳೂ ಇರಲಿಲ್ಲ. ಕಳೆದ ಆರು ತಿಂಗಳಿನಿಂದೀಚೆಗೆ ಸರಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಪರವಾನಿಗೆ ಸೀಮಿತಗೊಂಡಿದೆ. ಈಗಾಗಲೇ 55 ಕಡೆ ಕಲ್ಲು ಗಣಿಗಾರಿಕೆಗೆ ಪರವಾನಿಗೆ ದೊರಕಿದ್ದು, ಸುಮಾರು 29ರಷ್ಟು ಪರವಾನಿಗೆ ಪ್ರಕ್ರಿಯೆ ಹಂತದಲ್ಲಿದೆ. ಈ ಪರವಾನಿಗೆಗಳೂ ದೊರೆತಾಗ ಈಗಾಗಲೇ ಇಳಿಕೆಯಾಗುತ್ತಾ ಸಾಗಿರುವ ಕೆಂಪುಕಲ್ಲಿನ ದರ ಇನ್ನಷ್ಟು ಇಳಿಕೆಯಾಗಲಿದೆ ಎಂದರು.
ಕೆಂಪುಕಲ್ಲಿಗೆ ಸಾಕಷ್ಟು ಬೇಡಿಕೆ ಹೊರತಾಗಿಯೂ ಪರವಾನಿಗೆ ಸೀಮಿತವಾಗಿರುವುದರಿಂದ ಸಾಗಾಟ ದರ ಹೆಚ್ಚಳವಾಗಿದೆ. ಕೋರೆಗಳಲ್ಲಿ ಈಗಾಗಲೇ ಎರಡು ವಿಧದ ಕಲ್ಲು ತಲಾ 35 ರೂ.ದರದೊಳಗೆ ನೀಡಲಾಗುತ್ತಿದೆ. ನಗರಕ್ಕೆ ಹತ್ತಿರದಲ್ಲಿ 12 ಪರವಾನಿಗೆಗಳು ಮಾತ್ರವೇ ಇದ್ದು, ಉಳಿದೆಲ್ಲವೂ ಸುಳ್ಯ, ಪುತ್ತೂರು ಕಡೆ ಇರುವುದರಿಂದ ಸಾಗಾಟಕ್ಕೆ ಹೆಚ್ಚು ವೆಚ್ಚವಾಗುತ್ತಿದೆ ಎಂದವರು ಹೇಳಿದರು.
ಪರವಾನಿಗೆ ಮಾಡಬೇಕಾದರೆ ನಕ್ಷೆ ಮಾಡಿ ಭೂ ದಾಖಲೆ ಅಧಿಕಾರಿಗಳಿಗೆ ಸಲ್ಲಿಸಿ ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆದು ಬಳಿಕ ಅನುಮತಿ ನೀಡಲಾಗುತ್ತದೆ. ನಿಗದಿಪಡಿಸಿದ ಸ್ಥಳದಲ್ಲಿ ಕಲ್ಲು ದೊರೆಯದಿದ್ದರೆ ಇನ್ನೊಂದು ಜಾಗದಲ್ಲಿ ಅವಕಾಶ ಕೋರಲು ಮತ್ತೆ ಮರು ಅರ್ಜಿ ಸಲ್ಲಿಸಬೇಕಾಗುತ್ತದೆ. ಬಳಿಕ ಕಲ್ಲು ತೆಗೆದ ಜಾಗದಲ್ಲಿ ಮಣ್ಣು ತುಂಬಿಸುವ ಕಾರ್ಯ ನಡೆಯಬೇಕು. ಕೃಷಿಗೆ ಅಗತ್ಯವಾದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಈ ರೀತಿಯಾಗಿ ನಿಯಮಗಳು ಕಠಿಣಗೊಂಡಿರುವುದರಿಂದ ಪರವಾನಿಗೆ ಸಂಖ್ಯೆಯೂ ಕಡಿಮೆಯಾಗಿದೆ. 256 ರೂ.ಗಳಿಗೆ ಏರಿಕೆಯಾಗಿದ್ದ ರಾಜಧನ ಇದೀಗ ಹಿಂದಿನಂತೆ 97 ರೂ.ಗಳಿಗೆ ಇಳಿಕೆಯಾಗಿದೆ. ಒಂದು ಎಕರೆ ಭೂಮಿಯಲ್ಲಿ 16,000 ಟನ್ ಮುರಕಲ್ಲು (5,28000 ಕೆಂಪುಕಲ್ಲು) ತೆಗೆಯಲು ಅವಕಾಶವಿದೆ. ಕಲ್ಲೊಂದರ ಉತ್ಪಾದನೆಗೆ ಎಲ್ಲಾ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದಾಗ 28 ರೂ. ಗಳಾಗುತ್ತದೆ. ಸದ್ಯ ಕಲ್ಲು ಕೋರೆಗಳಲ್ಲಿ 32 ರೂ.ನಿಂದ 35 ರೂ. ದರದಲ್ಲಿ ಕಲ್ಲು ಪೂರೈಸಲಾಗುತ್ತಿದೆ ಎಂದು ಉಪಾಧ್ಯಕ್ಷ ರವಿಶಂಕರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ರಾಮ ಮುಗುರೋಡಿ, ಬಂಟ್ವಾಳ ವಲಯದ ಅಧಯಕ್ಷ ಮೋಹನ್ ಶೆಟ್ಟಿ, ರವಿ ರೈ ಪಜೀರು ಉಪಸ್ಥಿತರಿದ್ದರು.







