ಸಜಿಪ ಮುನ್ನೂರು : ಗೃಹಪ್ರವೇಶದ ಔತಣಕೂಟ ದಿನದಂದೇ ಯುವ ವಿದ್ವಾಂಸ ನಿಧನ

ಬಂಟ್ವಾಳ : ತನ್ನ ನೂತನ ಮನೆಯ ಗೃಹಪ್ರವೇಶದ ಔತಣಕೂಟದ ದಿನದಂದೇ ಯುವ ವಿದ್ವಾಂಸರೋರ್ವರು ನಿಧನರಾದ ಘಟನೆಯೊಂದು ಸಜಿಪಮುನ್ನೂರು ಗ್ರಾಮದ ಆಲಾಡಿ-ಕೊಪ್ಪಳ ಎಂಬಲ್ಲಿ ಸೋಮವಾರ ಬೆಳಗ್ಗಿನ ಜಾವ ಸಂಭವಿಸಿದೆ.
ಮೂಲತಃ ಸಜಿಪನಡು ನಿವಾಸಿ ಪುತ್ತುಮೋನಾಕ ಅವರ ಪುತ್ರ ಅಮೀರ್ ಅರ್ಶದಿ (36) ಹಠಾತ್ ಹೃದಯಾಘಾಕ್ಕೊಳಗಾಗಿ ನಿಧನರಾದ ಯುವ ವಿದ್ವಾಂಸ.
ತಾಳಿಪಡ್ಪು ಮಸ್ಜಿದುಲ್ ಹುದಾ ಮಸೀದಿಯಲ್ಲಿ ಕಳೆದ ಐದು ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಅತ್ಯುತ್ತಮ ವಾಗ್ಮಿಯಾಗಿದ್ದರು. ಜಮಾಅತ್ ವ್ಯಾಪ್ತಿಯಲ್ಲಿ ಹಲವು ಗಣನೀಯ ಬದಲಾವಣೆ ಹಾಗೂ ಯುವ ಸಮೂಹದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯ ನಡೆಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಕಿಡ್ನಿ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ರವಿವಾರ ಮಧ್ಯ ರಾತ್ರಿ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಬಿ ಸಿ ರೋಡು ಪರ್ಲಿಯಾದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಜಿಪಮುನ್ನೂರು ಗ್ರಾಮದ ಆಲಂಪಾಡಿ-ಕೊಪ್ಪಳ ಎಂಬಲ್ಲಿ ನಿರ್ಮಾಣಗೊಂಡ ಇವರ ನೂತನ ಮನೆಯ ಔಪಚಾರಿಕ ಗೃಹಪ್ರವೇಶವನ್ನು ಎಪ್ರಿಲ್ 17 ರಂದು ನಡೆಸಿದ್ದರು ಎನ್ನಲಾಗಿದ್ದು, ಎಪ್ರಿಲ್ 27 ರ ಸೋಮವಾರ (ಇಂದು) ಮಧ್ಯಾಹ್ನ ಬಂಧು-ಮಿತ್ರರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕಾಗಿ ನಿನ್ನೆ ರಾತ್ರಿವರೆಗೂ ಬಂಧು-ಮಿತ್ರರಿಗೆ ಕರೆ ಮಾಡಿ ಆಹ್ವಾನಿಸಿದ್ದರು. ಆಹ್ವಾನ ಸ್ವೀಕರಿಸಿದ ಬಂಧು-ಮಿತ್ರರು ಅವರ ಹಠಾತ್ ನಿಧನಕ್ಕೆ ತೀವ್ರ ಆಘಾತ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ. ನೂತನ ಗೃಹಪ್ರವೇಶ ಔತಣಕೂಟದ ಸಂಭ್ರಮ ಅನುಭವಿಸಬೇಕಾದ ಮನೆಯಲ್ಲಿ ಹಾಗೂ ಊರಿನಲ್ಲಿ ಇದೀಗ ದುಃಖದ ವಾತಾವರಣ ಮಡುಗಟ್ಟಿದೆ ಎಂದು ತಿಳಿದು ಬಂದಿದೆ.
ಮೃತ ಅಮೀರ್ ಅರ್ಶದಿ ಅವರು ತಂದೆ-ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು-ಮಿತ್ರ, ಅಭಿಮಾನಿ ಬಳಗವನ್ನು ಅಗಲಿದ್ದಾರೆ.






