ಸೌಜನ್ಯ ಅತ್ಯಾಚಾರ ,ಕೊಲೆ ಪ್ರಕರಣ: ನೈಜ ಆರೋಪಿಗಳ ಬಂಧನಕ್ಕೆ, ತನಿಖಾಧಿಕಾರಿ, ವೈದ್ಯರ ಮಂಪರು ಪರೀಕ್ಷೆಗೆ ಆಗ್ರಹ

ಮಂಗಳೂರು : ವಿದ್ಯಾರ್ಥಿನಿ ಸೌಜನ್ಯರ ಮೇಲೆ ಅತ್ಯಾಚಾರ ನಡೆಸಿ ಮತ್ತು ಕೊಲೆಗೈದ ನಡೆಸಿದ ನೈಜ ಆರೋಪಗಳನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿ ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ ವತಿಯಿಂದ ಎರಡು ದಿನಗಳ ಜಿಲ್ಲಾ ಮಟ್ಟದ ಧರಣಿ ಸತ್ಯಾಗ್ರಹ ನಗರದ ಕ್ಲಾಕ್ ಟವರ್ ಬಳಿ ಮಂಗಳವಾರ ಬೆಳಗ್ಗೆ ಆರಂಭಗೊಂಡಿತು.
ಧರಣಿ ಸತ್ಯಾಗ್ರಹವನ್ನು ಸೌಜನ್ಯ ತಾತ ಬಾಬು ಗೌಡ ಉದ್ಘಾಟಿಸಿದರು. ಬಳಿಕ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಾಲಕೃಷ್ಣ ಗೌಡ ಡಿಬಿ ಅವರು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಅಪರಾಧಿಗಳನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷಿಸಬೇಕು, ಈಗಾಗಲೇ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಮತ್ತು ವೈದ್ಯರನ್ನು ಮಂಪರು ಪರೀಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಸೌಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಾವು ಒಂದು ವಾರ ಧರಣಿ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದೇವು.ಆದರೆ ನಮಗೆ ಎರಡು ದಿನಗಳ ಕಾಲ ಹೋರಾಟ ನಡೆಸಲು ಅನುಮತಿ ಸಿಕ್ಕಿದೆ. ಜಿಲ್ಲೆಯ ಆರು ತಾಲೂಕುಗಳ ಒಕ್ಕಲಿಗರ ಯಾನೆ ಗೌಡರ ಸಂಘಟನೆಯ ಧುರೀಣರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ದಿನ ಜಿಲ್ಲೆಯ ಮೂರು ತಾಲೂಕುಗಳ ಸಂಘಟನೆಗಳ ಧುರೀಣರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. ಎರಡನೇ ದಿನ ಮೂರು ತಾಲೂಕುಗಳ ಸಂಘದ ಧುರೀಣರು ಭಾಗವಹಿಸಲಿದ್ದಾರೆ. ನ್ಯಾಯ ಸಿಗುವ ತನಕ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಆಗಮಿಸಿ ನಮ್ಮ ಮನವಿಯನ್ನು ಸ್ವೀಕರಿಸಬೇಕು ಎಂದು ಅವರು ಆಗ್ರಹಿಸಿದರು.
ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಗುರುದೇವ್ ಯು ಬಿ ಅವರು ಮಾತನಾಡಿ ಸೌಜನ್ಯ ಪ್ರಕರಣದಲ್ಲಿ 11 ವರ್ಷಗಳ ವಿಚಾರಣೆ ನಡೆದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.ಅಂದು ಆರೋಪಿಯಾಗಿ ಗುರುತಿ ಸಿಕೊಂಡಿದ್ದ ವ್ಯಕ್ತಿ ನಿರಪರಾಧಿ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. ಆದರೆ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿದ ಮತ್ತು ಆಕೆಯನ್ನು ಕೊಲೆಗೈದ ನೈಜ ಆರೋಪಿಗಳು ಯಾರು ಮತ್ತು ಇದಕ್ಕೆ ನೆರವು ನೀಡಿದವರು ಯಾರು ಎಂಬ ವಿಚಾರ ತನಿಖೆಯಿಂದ ಹೊರ ಬಂದಿಲ್ಲ ಎಂದರು.
ಯಾವುದೇ ಹೆಣ್ಣಿಗೂ ಸೌಜನ್ಯಳಿಗೆ ಆಗಿರುವ ಸ್ಥಿತಿ ಬರಬಾರದು. ಸೌಜನ್ಯ ಕೊಲೆ ಪ್ರಕರಣದ ತಾರ್ಕಿಕವಾದ ಅಂತ್ಯ ತಲುಪಬೇಕು. ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಹೋರಾಟವಾಗಿದೆ ಎಂದು ಹೇಳಿದರು.
ಗೌಡರ ಯಾನೆ ಒಕ್ಕಲಿಗರ ಸಂಘದ ವಿವಿಧ ತಾಲೂಕುಗಳ ಧುರೀಣರಾದ ಕುಶಾಲಪ್ಪ ಗೌಡ ಪೂವಾಜೆ ,ಪದ್ಮನಾಭ ಗೌಡ ಬೆಳ್ತಂಗಡಿ, ಚಂದ್ರ ಕೊಳ್ಚಾರ್ ಸುಳ್ಯ, ಸುರೇಶ್ ಬೈಲ್ ಕಡಬ, ಮೋನಪ್ಪ ಗೌಡ ವಿಟ್ಲ, ಧರ್ಮಾವತಿ ಗೌಡ, ಕಿರಣ್ ಬುಡ್ಲೆಗುತ್ತು, ರಕ್ಷಿತ್, ನಾಗೇಶ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು, ಬೆಳ್ತಂಗಡಿ, ವಿಟ್ಲ-ಬಂಟ್ವಾಳ ತಾಲೂಕುಗಳ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.







