ಫರಂಗಿಪೇಟೆ | ದಿಗಂತ್ ನಾಪತ್ತೆ ಪ್ರಕರಣ; ಸುಮಾರು 150 ಪೊಲೀಸರಿಂದ ಶೋಧ ಕಾರ್ಯಾಚರಣೆ

ಫರಂಗಿಪೇಟೆ: ಅಮೆಮ್ಮಾರ್ ಕಿದೆಬೆಟ್ಟು ನಿವಾಸಿ ದಿಗಂತ್ ನಾಪತ್ತೆಯಾಗಿ ಇಂದಿಗೆ ಹನ್ನೊಂದು ದಿವಸ ಕಳೆದರೂ ಈವರೆಗೆ ಯಾವುದೇ ಸುಳಿವು ಸಿಗಲಿಲ್ಲ. ಈ ನಿಟ್ಟಿನಲ್ಲಿ ದಿಗಂತ್ ನನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ಶೋಧ ಕಾರ್ಯ ಮುಂದುವರಿಸಿದ್ದು, ಮಾ.8ರಂದು ಶನಿವಾರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್.ನೇತೃತ್ವದ ಸುಮಾರು 150 ರಷ್ಟಿರುವ ಜಿಲ್ಲಾ ಪೋಲೀಸ್ ತಂಡ ಫರಂಗಿಪೇಟೆ ಸುತ್ತಮುತ್ತಲಿನ ಸ್ಥಳದ ಪ್ರದೇಶಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಕೂಂಬಿಂಗ್ (ಶೋಧ) ಕಾರ್ಯ ಆರಂಭಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, "ಅಗ್ನಿ ಶಾಮಕ ದಳ, ಡ್ರೋನ್, ಶ್ವಾನ ದಳ ಸೇರಿದಂತೆ ಜಿಲ್ಲೆಯ ಸುಮಾರು 150ರಷ್ಟು ಪೊಲೀಸ್ ತಂಡಗಳನ್ನು ರಚಿಸಿ ದಿಗಂತ್ ಪತ್ತೆಗಾಗಿ ಶನಿವಾರ ಕೂಂಬಿಂಗ್ ನಡೆಸಲಾಗಿದೆ. ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಪೊಲೀಸ್ ಇಲಾಖೆ ಶಕ್ತಿ ಮೀರಿ ಈ ಪ್ರಕರಣವನ್ನು ಭೇದಿಸಲು ಪ್ರಯತ್ನಿಸುತ್ತಿದೆ" ಎಂದು ಹೇಳಿದ್ದಾರೆ.
ದಿಗಂತ್ ಮನೆಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ
ಬಾಲಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ದಿಗಂತ್ ಮನೆಗೆ ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಧೈರ್ಯ ಮತ್ತು ಸಾಂತ್ವಾನ ತಿಳಿಸಿದ್ದಾರೆ
ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಶೋಧ ಕಾರ್ಯಾಚರಣೆಗೆ ಪೊಲೀಸ್ ಅಧಿಕಾರಿಗಳಿಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದೇನೆ. ನಾವು ಎಷ್ಟೇ ಸಾಂತ್ವಾನ ಹೇಳಿದರೂ ಮನೆ ಮಗನ ನಾಪತ್ತೆಯಿಂದ ಕುಟುಂಬಕ್ಕೆ ಸಮಾಧಾನವಾಗಲು ಸಾಧ್ಯವಿಲ್ಲ. ಆದರೂ ನೋವಿನಲ್ಲಿರುವ ಕುಟುಂಬದೊಂದಿಗೆ ನಾವೆಲ್ಲರೂ ಸಹಬಾಗಿಗಳಾಗುತ್ತೇವೆ. ಪ್ರಕರಣವನ್ನು ಇನ್ನಷ್ಟು ಆಯಾಮಗಳಿಂದ ತನಿಖೆ ನಡೆಸಲು ಗೃಹ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು







