ಕೇರಳದ ಕಡಲಿನಲ್ಲಿ ಹಡಗು ಅಗ್ನಿ ದುರಂತ: ಗಾಯಾಳು, ರಕ್ಷಿಸಲ್ಪಟ್ಟವರು ಮಂಗಳೂರಿಗೆ
18 ಮಂದಿಯನ್ನು ಪಣಂಬೂರಿನ ಎನ್ ಎಂಪಿಎಗೆ ಕರೆತಂದ INS ಸೂರತ್

ಮಂಗಳೂರು, ಜೂ.10: ಕೇರಳದ ಬೇಪೋರ್ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲು ದೂರದಲ್ಲಿ ಬೃಹತ್ ಕಂಟೈನರ್ ಹಡಗಿ(ಎಂವಿ ವಾನ್ ಹೈ 503)ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಗಾಯಗೊಂಡಿರುವ ಹಡಗಿನ ಆರು ಮಂದಿ ಸಿಬ್ಬಂದಿಯನ್ನು ರಕ್ಷಿಸಿ ಮಂಗಳೂರಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇರೀತಿ ರಕ್ಷಿಸಲ್ಪಟ್ಟ ಉಳಿದ 12 ಮಂದಿಯನ್ನೂ ಮಂಗಳೂರಿಗೆ ಕರೆತರಲಾಗಿದೆ.
ರಕ್ಷಿಸಲ್ಪಟ್ಟ ಮತ್ತು ಗಾಯಗೊಂಡ ಸಿಬ್ಬಂದಿಯನ್ನು ಹೊತ್ತ ಐಎನ್ಎಸ್ ಸೂರತ್ ಸೋಮವಾರ ತಡರಾತ್ರಿ ಪಣಂಬೂರಿನ ಹೊಸ ಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ)ಕ್ಕೆ ಆಗಮಿಸಿದೆ. ಬಂದರಿನಿಂದ ಆರು ಮಂದಿ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 12 ಮಂದಿಗೆ ನಗರದ ಹೊಟೇಲ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಚೀನಾ ಮೂಲದ ಲೂ ಯಾನ್ಲಿ ಮತ್ತು ಇಂಡೋನೇಷ್ಯಾದ ಸೋನಿಟೂರ್ ಹೆನಿ ಎಂಬವರಿಗೆ ಗಂಭೀರ ಗಾಯಗಳಾಗಿದೆ. ಅದೇ ರೀತಿ ಚೀನಾದ ಕ್ಸೂ ಪಬೋ, ಗೋ ಲೆನಿನೊ, ಮ್ಯಾನ್ಮರ್ ನ ಥೆನ್ ಥಾನ್ ತ್ವಾಯ್, ಕಿ ಝಾವ್ ತ್ವೂ ಎಂಬವರು ಗಾಯಗೊಂಡಿದ್ದಾರೆ. ಉಳಿದ 12 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ತೈವಾನ್ ನ ಯು ಬೊ ಫಾಂಗ್, ಮ್ಯಾನ್ಮರ್ ನ ಸಾನ್ ವಿನ್, ಇಂಡೋನೇಶ್ಯದ ಝೈನುಲ್ ಆಬಿದಿನ್ ಮತ್ತು ತೈವಾನ್ ನ ಸಿಹ್ ಚಾಯ್ ವಾನ್ ಎಂಬವರು ಕಡಲಿನಲ್ಲಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಅಗ್ನಿ ದುರಂತಕ್ಕೀಡಾದ ಹಡಗಿನ ರಕ್ಷಣಾ ಕಾರ್ಯಾಚರಣೆ (ಫೊಟೊ: X@IndiaCoastGuard)
ಒಟ್ಟು 22 ಮಂದಿ ಸಿಬ್ಬಂದಿಯಿದ್ದ ಶ್ರೀಲಂಕಾದ ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಸಿಂಗಾಪುರ ಮೂಲದ ಈ ಕಂಟೈನರ್ ಹಡಗು(ಎಂವಿ ವಾನ್ ಹೈ 503) ಕೇರಳದ ಬೇಪೋರ್ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲು ದೂರದಲ್ಲಿದ್ದ ಅಗ್ನಿ ದುರಂತಕ್ಕೀಡಾಗಿದೆ. ಭಾರೀ ಸ್ಫೋಟದೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಸರಣಿ ಸ್ಫೋಟ ಮತ್ತು ಬೆಂಕಿಯ ಬಳಿಕ ಹಡಗಿನಲ್ಲಿದ್ದ 20 ಕಂಟೈನರ್ ಗಳು ಸಮುದ್ರಕ್ಕೆ ಬಿದ್ದಿವೆ. ಈ ವೇಳೆ ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದರೆ, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 12 ಮಂದಿ ರಕ್ಷಿಸಲ್ಪಟ್ಟಿದ್ದಾರೆ.