ಕ್ರಿಸ್ ಮಸ್-ಹೊಸ ವರ್ಷಕ್ಕೆ ಕೊರೋನ ವೈರಸ್ ಹೆಸರಲ್ಲಿ ಕಾಟ ಕೊಡುವುದು ನಿಲ್ಲಲಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ

ಬೆಂಗಳೂರು: ಕೇರಳದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಹೊರಡಿಸಿದೆ. ಕ್ರಿಸ್ ಮಸ್ ಹಾಗೂ ಹೊಸವರ್ಷಾಚರಣೆಯ ಸಂದರ್ಭದಲ್ಲಿ ಹೆಚ್ಚಾಗುವ ಸಂಭವನೀಯ ಜನದಟ್ಟಣೆ, ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮಾರ್ಗಸೂಚಿಯನ್ನು ಸರಕಾರ ಬಿಡುಗಡೆ ಮಾಡಿತ್ತು.
ಈ ಹಿನ್ನಲೆ ಪ್ರತಿಕ್ರಿಯಿಸಿರುವ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಉತ್ತರಾರ್ಧ ಗೋಳದಲ್ಲಿ ಡಿಸೆಂಬರ್ ಹವೆಗೆ ಕೆಮ್ಮು-ನೆಗಡಿ ಸಾಮಾನ್ಯ. ಆದ್ದರಿಂದ ಪ್ರತೀ ಕ್ರಿಸ್ಮಸ್-ಹೊಸ ವರ್ಷಕ್ಕೆ ವೈರಸ್ ಹೆಸರಲ್ಲಿ ಹೆದರಿಸಿ ಕಾಟ ಕೊಡುವುದು ನಿಲ್ಲಲಿ ಎಂದು ಹೇಳಿದ್ದಾರೆ.
"ಉತ್ತರಾರ್ಧ ಗೋಳದಲ್ಲಿ ಡಿಸೆಂಬರ್ ಹವೆಗೆ ಕೆಮ್ಮು-ನೆಗಡಿ ಸಾಮಾನ್ಯ. ಹೊಸ ಕೊರೋನ ವೈರಸ್ ಪದೇ ಪದೇ ಸಣ್ಣ ಮಟ್ಟಿಗೆ ರೂಪ ಬದಲಿಸುವುದು ಕೂಡ ಸಾಮಾನ್ಯವೇ ಆಗಿದೆ. ಕೇರಳ ರಾಜ್ಯ ಕೊರೋನ ಪರೀಕ್ಷೆ ನಿಲ್ಲಿಸಬೇಕು" ಎಂದು ಕಕ್ಕಿಲ್ಲಾಯ ಆಗ್ರಹಿಸಿದ್ದಾರೆ.
"ಪ್ರತೀ ಕ್ರಿಸ್ಮಸ್-ಹೊಸ ವರ್ಷಕ್ಕೆ ವೈರಸ್ ಹೆಸರಲ್ಲಿ ಹೆದರಿಸಿ ಕಾಟ ಕೊಡುವುದು ನಿಲ್ಲಲಿ. ವಿಶ್ವದ ಯಾವುದೇ ಭಾಗದಲ್ಲೂ ಹೇರದ ನಿಯಮಗಳನ್ನು ಕರ್ನಾಟಕದಲ್ಲಿ ಮಾತ್ರ ಹೇರುವುದು ಅನಗತ್ಯ, ಅವಮಾನಕರ. ಅಂತೂ 2020ರ ಮಾರ್ಚ್ ನಿಂದ ಮಾಡಿದ ಲಾಕ್ ಡೌನ್, ಮಾಸ್ಕ್ ನಿಯಮ, ಒತ್ತಾಯದಿಂದ ಹಾಕಿಸಿದ ಲಸಿಕೆ ಯಾವುವೂ ಪ್ರಯೋಜನವಾಗಲಿಲ್ಲ, ಕೊರೋನ ತಡೆಯಲು ಆಗಲಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಯಿತು, ಅದನ್ನು ಈ ಸರಕಾರಗಳು ಮತ್ತು ತಥಾಕಥಿತ ತಜ್ಞರು ನೇರವಾಗಿ ಒಪ್ಪಿಕೊಳ್ಳಲಿ" ಎಂದು ಅವರು ಪೋಸ್ಟ್ ಮಾಡಿದ್ದಾರೆ.







