ಸುರತ್ಕಲ್| ಮದರಸ ಅಧ್ಯಾಪಕರಿಗೆ ಹಲ್ಲೆ; ಪ್ರಕರಣ ದಾಖಲು

ಸುರತ್ಕಲ್: ವಿದ್ಯಾರ್ಥಿಯೊಬ್ಬನಿಗೆ ಹೊಡೆದಿದ್ದಾರೆಂದು ಆರೋಪಿಸಿ ಮಂಗಳವಾರ ರಾತ್ರಿ ಮಸೀದಿಗೆ ಅಕ್ರಮ ಪ್ರವೇಶ ಮಾಡಿ ಮದರಸ ಅಧ್ಯಾಪಕರಿಗೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿ ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯು ಗುರುವಾರ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ತನ್ನ ತಮ್ಮನ ಮಗನಿಗೆ ಮದರಸ ಅಧ್ಯಾಪಕರಾದ ಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿ ಉಮರ್ ಫಾರೂಕ್ ಸಖಾಫಿ ಎಂಬವರು ಹೊಡೆದಿದ್ದಾರೆ ಎಂದು ಆರೋಪಿಸಿ ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ಶಂಸುದ್ದೀನ್ ಎಂಬಾತ ಕೃಷ್ಣಾಪುರದ ತ್ವೈಬಾ ಮಸೀದಿಗೆ ಅಕ್ರಮ ಪ್ರವೇಶಿಸಿ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಆಡಳಿಯ ಮಂಡಳಿ ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.
ಘಟನೆಗೆ ಸಂಬಂಧಿಸಿ ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಶಂಸುದ್ದೀನ್ ನನ್ನು ಸುರತ್ಕಲ್ ಮೂಡ ಮಾಡುಕಟ್ಟೆಯಲ್ಲಿದ್ದ ಆತನ ಮೊಬೈಲ್ ಅಂಗಡಿಯಿಂದ ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿರಿಸಿದ್ದರು.
ಘಟನೆಗೆ ಸಂಬಂಧಿಸಿ ಅಬ್ದುಲ್ ಬಶೀರ್ ಎಂಬವರು ʼವಾರ್ತಾಭಾರತಿʼಯೊಂದಿಗೆ ಮಾತನಾಡಿ, ಅಧ್ಯಾಪಕರು ಮಕ್ಕಳಿಗೆ ಹೊಡೆದ ವಿಚಾರ ತಿಳಿಯುತ್ತಲೇ ನಾನು ತ್ವೈಬಾ ಮಸೀದಿಯ ಉಪಾಧ್ಯಕ್ಷರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದೆ. ಈ ಮಧ್ಯೆ ಮದರಸ ಬಿಟ್ಟು ಮನೆಗೆ ಬರುತ್ತಿದ್ದ ನನ್ನ ಬಾವನ ಮಗ ರಸ್ತೆಯಲ್ಲಿ ಅಕಸ್ಮಾತ್ ಆಗಿ ಸಿಕ್ಕ ತನ್ನ ದೊಡ್ಡಪ್ಪನ ಬಳಿ ಅಧ್ಯಾಪಕರು ಹೊಡೆದಿರುವ ವಿಚಾರ ತಿಳಿಸಿದ್ದು, ರಕ್ತ ಹೆಪ್ಪುಗಟ್ಟಿರು ವುದನ್ನು ಕಂಡ ಶಂಸುದ್ದೀನ್ ಕುಪಿತಗೊಂಡು ಅಧ್ಯಾಪಕರಿಗೆ ಹಲ್ಲೆ ನಡೆಸಿದ್ದಾನೆ. ನಂತರ ಪಶ್ಚಾತಪಕ್ಕೊಳಗಾದ ಸಂಶುದ್ದೀನ್ ಅಧ್ಯಾಪಕ ಫಾರೂಕ್ ಸಾಖಾಫಿ ಅವರೊಂದಿಗೆ ಮೂರು ಬಾರಿ ಕ್ಷಮೆ ಕೇಳಿದ್ದಾನೆ. ಅವರೂ ಆ ವೇಳೆ ಕ್ಷಮಿಸಿರುವುದಾಗಿ ಹೇಳಿ ಆತನನ್ನು ಕಳುಹಿಸಿ ಕೊಟ್ಟಿದ್ದರು. ಅದರೊಂದಿಗೆ ಪ್ರಕರಣ ಸುಖಾಂತ್ಯಗೊಂಡಿತ್ತು. ಈ ಮಧ್ಯೆ ಶಂಸುದ್ದೀನ್ ಅಧ್ಯಾಪಕರಿಗೆ ಹಲ್ಲೆ ಮಾಡುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ತೊಡಗಿತ್ತು. ಇದರಿಂದಾಗಿ ಸುಖಾಂತ್ಯಗೊಂಡಿದ್ದ ವಿಷಯ ಮತ್ತೆ ಮುನ್ನಗೆ ಬರುವಂತಾಯಿತು. ಈ ವೀಡಿಯೊ ದಿಂದಾಗಿ ನಮ್ಮ ಮನೆಯ ಓರ್ವ ಮಹಿಳೆ ಸೇರಿ ಹಲ್ಲೆಗೊಳಗಾದ ಅಧ್ಯಾಪಕರ ಮಾನವನ್ನು ಹರಾಜು ಹಾಕಿದಂತಾ ಗಿದೆ. ಹಾಗಾಗಿ ವೀಡಿಯೊ ಮಾಡಿ ವೈರಲ್ ಮಾಡಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಿ ದ್ದೇವೆ ಎಂದು ಸಂಶುದ್ದೀನ್ ಅವರ ಬಾವ ಅಬ್ದುಲ್ ಬಶೀರ್ ವಾರ್ತಾಭಾರತಿಗೆ ತಿಳಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಮಗುವಿಗೆ ಬೆನ್ನಿಗೆ ಹೊಡೆದಿರುವ ವೀಡಿಯೋವನ್ನು ಈ ಪ್ರಕರಣದೊಂದಿಗೆ ತಳುಕು ಹಾಕಿ ಪ್ರಸಾರ ಮಾಡಲಾಗುತ್ತಿದೆ. ಬಾಲಕನಿಗೆ ಉಸ್ತಾದ್ ಮೊಣಕಾಲಿನ ಕೆಳಗೆ ಎರಡು ಪೆಟ್ಟು ಕೊಟ್ಟಿದ್ದಾರೆ ಹೊರತು ಬೇರೆಲ್ಲಿಗೂ ಹೊಡೆದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬೆನ್ನಿಗೆ ಹೊಡೆದಿರುವ ವೀಡಿಯೊ, ಫೊಟೊ ನಮ್ಮ ಮಸೀದಿಯ ವಿದ್ಯಾರ್ಥಿಯದ್ದಲ್ಲ. ಅದಕ್ಕೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಕೃಷ್ಣಾಪುರ ತ್ವೈಬಾ ಜುಮಾ ಮಸೀದಿಯ ಖತೀಬ್ ಮುಸ್ತಫಾ ಸಅದಿ ಅವರು ಸ್ಪಷ್ಟಪಡಿಸಿದ್ದಾರೆ.
"ಉಸ್ತಾದರು ಕಲಿಕೆಯ ವಿಚಾರವಾಗಿ ಎಲ್ಲ ಮಕ್ಕಳಿಗೆ ಪೆಟ್ಟು ಕೊಟ್ಟಿರುವಂತೆ ಆ ವಿದ್ಯಾರ್ಥಿಗೂ ಮೊಣಕಾಲಿನ ಕೆಳಗೆ ಎರಡು ಪೆಟ್ಟು ಕೊಟ್ಟಿದ್ದಾರೆ. ಈ ವಿಚಾರವಾಗಿ ಮನೆಯವರು ಕೇಳಲು ಬಂದಿದ್ದರು. ಆ ವೇಳೆ ನಾವು ಊಟ ಮಾಡು ತ್ತಿದ್ದೆವು. ಕಮೀಟಿಗೆ ದೂರು ನೀಡಿ ಅವರ ಸಮ್ಮುಖದಲ್ಲಿ ಮಾತನಾಡಿ ಮುಗಿಸುವ ಎಂದು ಹೇಳುತ್ತಿದ್ದಂತೆಯೇ ಬಾಲಕನ ದೊಡ್ಡಪ್ಪ ಏಕಾಏಕಿ ಉಸ್ತಾದ್ ರಿಗೆ ಹಲ್ಲೆ ಮಾಡಿದ್ದಾರೆ".
-ಮುಸ್ತಫಾ ಸಅದಿ, ಖತೀಬ್ ತ್ವೈಬಾ ಜುಮಾ ಮಸೀದಿ ಕೃಷ್ಣಾಪುರ
"ತ್ವೈಬಾ ಜುಮಾ ಮಸೀದಿಯು ಬದ್ರಿಯಾ ಕೇಂದ್ರ ಜುಮಾ ಮಸೀದಿಯ ಅಧೀನಕ್ಕೆ ಒಳಪಟ್ಟಿದ್ದು, ಮದರಸದ ಅಧ್ಯಾಪಕರು ವಿದ್ಯಾರ್ಥಿಯೊಬ್ಬನಿಗೆ ಎರಡು ಪೆಟ್ಟುಕೊಟ್ಟಿದ್ದಾರೆ. ಇಂತಹಾ ಘಟನೆಗಳು ನಡೆದಿದ್ದರೆ ಮಕ್ಕಳ ಪೋಷಕರು ಮಸೀದಿಯ ಜಮಾಅತ್ ಕಮಿಟಿಗೆ ದೂರು ನೀಡಬೇಕಿತ್ತು. ಆದರೆ, ಓರ್ವ ನೇರವಾಗಿ ಅಧ್ಯಾಪಕರಿಗೆ ಹಲ್ಲೆ ನನಡೆಸಿದ್ದಾರೆ. ಆ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಕಾರಣ ರಾತ್ರಿ ಆಡಳಿತ ಸಮಿತಿಯ ತುರ್ತು ಸಭೆ ನಡೆಸಿದ್ದು, ಸಭೆಯಲ್ಲಿ ತೀರ್ಮಾನಿಸಿದಂತೆ ಅಧ್ಯಾಪಕರ ಮೇಳೆ ಹಲ್ಲೆ ನಡೆಸಿರುವ ಶಂಸುದ್ದೀನ್ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅದರಂತೆ ಸುರತ್ಕಲ್ ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಾರೆ".
-ಹನೀಫ್, ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಕಾರ್ಯದರ್ಶಿ






