ರಾಜೀನಾಮೆ ವಿಚಾರ ನನಗೆ ನೇರವಾಗಿ ಸಂಬಂಧಪಡುವುದಿಲ್ಲ: ದಿನೇಶ್ ಗುಂಡೂರಾವ್
ಸುದ್ದಿಗೋಷ್ಟಿಯ ನಡುವೆ ಮಾತನಾಡುವವರನ್ನು ಹೊರಗೆ ಕಳುಹಿಸಲು ಸೂಚಿಸಿದ ಸಚಿವ

ಮಂಗಳೂರು, ಮೇ 31: ಯಾವುದೇ ವಿಚಾರದಿಂದ ಆಕ್ರೋಶಗೊಂಡು ಪಕ್ಷಕ್ಕೆ ರಾಜೀನಾಮೆ ನೀಡುವುದು ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಅದು ನೇರವಾಗಿ ನನಗೆ ಸಂಬಂಧಪಡುವುದಿಲ್ಲ. ಪಕ್ಷದ ಮುಸ್ಲಿಂ ಮುಖಂಡರ ರಾಜೀನಾಮೆ ವಿಚಾರ ನನ್ನ ಬಳಿ ಬಂದಿಲ್ಲ. ನಾನು ಸರಕಾರದ ಪ್ರತಿನಿಧಿ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಒಂದೇ ದೃಷ್ಟಿಯಿಂದ ನೋಡುತ್ತೇನೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸರಕಾರ ಎಂದ ಮೇಲೆ ನಮಗೆ ಎಲ್ಲಾ ಧರ್ಮ, ಪಕ್ಷ, ಸಂಘಟನೆಯವರೂ ಒಂದೇ. ಶಾಂತಿ ಸುವ್ಯವಸ್ಥೆ ಕಾಪಾಡುವುದು, ಗಲಭೆ ಹಾಗೂ ಹತ್ಯೆಗಳನ್ನು ನಿಲ್ಲಿಸೋದು ನನ್ನ ಮುಖ್ಯ ಜವಾಬ್ದಾರಿ. ಯಾವುದೇ ಘಟನೆ ನಡೆದಾಗ ಸ್ಥಳಕ್ಕೆ ಬರಬೇಕು ಎನ್ನುವುದನ್ನು ಸಮಯ ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಾಗುತ್ತದೆ. ಕೆಲವರದ್ದು ಅವರವರ ಧರ್ಮದವರು ತೀರಿ ಹೋದಾಗ ಮಾತ್ರ ಆಕ್ರೋಶ. ನನಗೆ ಯಾವ ಧರ್ಮದವರೂ ತೀರಿ ಹೋದರೂ ಆಕ್ರೋಶ ಬರುತ್ತದೆ. ಕೆಲವರಿಗೆ ಈ ಸಾವುಗಳು ರಾಜಕೀಯ ಬಂಡವಾಳವಾಗಿರುತ್ತದೆ ಎಂದರು.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ವೇಳೆ ಪ್ರಚೋದನಾಕಾರಿ ಭಾಷಣಗಳ ವಿಷಯದ ಚರ್ಚೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮಧ್ಯ ಪ್ರವೇಶಿಸಿ "ಬಜಪೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರಿಂದಲೇ ಹತ್ಯೆ ನಡೆದಿದೆ" ಎಂದು ಆರೋಪಿಸಿದರು.
ದ.ಕ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಸುರಿದ ಮಳೆಯಿಂದ ಉಳ್ಳಾಲ ಕ್ಷೇತ್ರ ಹಾಗು ಮಂಗಳೂರಿನಲ್ಲಿ ಹೆಚ್ಚು ಮಳೆ ಹಾನಿಯಾಗಿದೆ. ಮೊಂಟೆಪದವಿನಲ್ಲಿ ಒಂದೇ ಕುಟುಂಬದ ಮೂರು ಮಂದಿ ಮೃತರಾಗಿದ್ದಾರೆ. ಬದುಕುಳಿದ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ. ಅಶ್ವಿನಿ ಎಂಬ ಮಹಿಳೆಯ ಪರಿಸ್ಥಿತಿಯೂ ಗಂಭೀರವಾಗಿದೆ. ಇದು ಕೆಟ್ಟ ದುರ್ಘಟನೆ. ಕಾಂಪೌಂಡ್ ಕುಸಿದು ಬಿದ್ದು ಮೃತಪಟ್ಟ ಬಾಲಕಿಯ ಕುಟುಂಬವನ್ನೂ ಭೇಟಿ ಮಾಡಿದ್ದು, ಮೃತಟ್ಟವರ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಮುಂಜಾಗೃತಾ ಕ್ರಮಗಳಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೆಲವೊಮ್ಮೆ ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿ, ಮನೆ ನಿರ್ಮಾಣಗಳಿಂದಲೂ ಮಳೆಗಾಲದಲ್ಲಿ ಭೂಕುಸಿತಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಇಲಾಖೆಯಿಂದ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಮಳೆಗಾಲಕ್ಕೆ ಮುಂಚಿತವಾಗಿಯೇ ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿ ಎಚ್ಚರಿಕೆ ನೀಡಲಾಗುತ್ತದೆ. ಆದರೆ ಸ್ಥಳಾಂತರ ಮಾಡುವುದು ಮನೆಯವರ ಅನುಮತಿ ಮೇರೆಗೆ. ನಿರ್ದಿಷ್ಟವಾಗಿ ಎಲ್ಲಿ ಅನಾಹುತ ಸಂಭವಿಸುತ್ತದೆ ಎಂದು ಹೇಳಲು ಆಗದ ಕಾರಣ ಇಂತಹ ಸಂದರ್ಭಗಳಲ್ಲಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಕೂಡಾ ಕೆಲವೊಮ್ಮೆ ಅಸಾಧ್ಯವಾಗಿರುತ್ತದೆ ಎಂದರು.
ಪರಿಹಾರ ವಂಚಿತರಿಗೆ ಮಾನದಂಡಗಳ ಆಧಾರದ ಮೇಲೆ ಶೀಘ್ರ ಪರಿಹಾರ ನೀಡಲಾಗುತ್ತದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಜಿಲ್ಲೆಗೆ ಅಗತ್ಯ ಹೆಚ್ಚುವರಿ ಸುರಕ್ಷಾ ವಾಹನಗಳನ್ನು ನೀಡುವ ಬಗ್ಗೆ ಕ್ರಮ ವಹಿಸಲಾಗುತ್ತದೆ. ಒಂದು ತಿಂಗಳೊಳಗೆ ಹೆಚ್ಚುವರಿ ವಾಹನಗಳ ವ್ಯವಸ್ಥೆ ಆಗಲಿದೆ. ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಕಾರ್ಯದರ್ಶಿ ಜತೆ ಮಾತುಕತೆ ನಡೆಸಲಾಗಿದ್ದು, ಅವರನ್ನು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲು ನಿರ್ದಶಿಸಲಾಗಿದೆ ಎಂದು ಸಚಿವ ಗುಂಡೂರಾವ್ ತಿಳಿಸಿದರು.
ಸುದ್ದಿಗೋಷ್ಟಿ ಸಂದರ್ಭದಲ್ಲಿ ಮಾತನಾಡುವವರನ್ನು ಹೊರಗೆ ಕಳುಹಿಸಿ ಎಂದು ಸಚಿವರು ಗದರಿದರು. ಈ ಸಂದರ್ಭ ಐವನ್ ಡಿಸೋಜಾರವರು ಮುಖಂಡರನ್ನು ಸಮಾಧಾನಗೊಳಿಸಿದರು.
ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಕಾರಯಕರ್ತರೊಬ್ಬರು, ಬಜಪೆ ಚಲೋದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದವರನ್ನು ಮೊದಲು ಬಂಧಿಸಲಿ. ಕೊಲ್ಲಬೇಕು ಎಂದು ಸಿನೆಮಾ ಶೈಲಿಯಲ್ಲಿ ಹೇಳಿಕೆ ನೀಡುತ್ತಾರೆ. ಯಾರ ಜೀವ ಹೋಗಬಾರದು. ದ.ಕ. ಜಿಲ್ಲೆ ಶಾಂತಿಯಿಂದ ಇರಬೇಕು ಎಬುದು ನಮ್ಮ ಉದ್ದೇಶ. ನಮ್ಮದೇ ಸರಕಾರ ಇದೆ. ಪೊಲೀಸ್ ಇಲಾಖೆಗೆ ಆದೇಶ ಕೊಟ್ಟು ತಪ್ಪು ಮಾಡಿದವರನ್ನು ಬಂಧಿಸಲಿ. ಫೇಸ್‌ಬುಕ್‌ನಲ್ಲಿ ಯಾರಾದರೂ ಸಣ್ಣ ಕವೆುಂಟ್ ಹಾಕಿದರೂ ಬಂಧಿಸುತ್ತಾರೆ. ಕೋಮು ಭಾಷಣ ಮಾಡಿ, ಪ್ರಚೋದನೆ ಮಾಡುವವರನ್ನೂ ಬಂಧಿಸಿ ನ್ಯಾಯ ಕೊಡಿ ಎಂದಷ್ಟೇ ನಾವು ಕೇಳುವುದು. ಪೊಲೀಸರು ಇಂತಹವರ ಬಗ್ಗೆ ಭಯ ಪಡುತ್ತಾರೆ. ಇದೀಗ ಜಿಲ್ಲೆಗೆ ಹೊಸ ಅಧಿಕಾರಿಗಳು ಬಂದಿದ್ದಾರೆ. ಅವರ ಮೇಲೆ ನಮಗೆ ವಿಶ್ವಾಸ ಇದೆ ಎಂದವರು ಹೇಳಿದರು.