ದಂತ ವೈದ್ಯನ ಕುಂಚದಲ್ಲಿ ಅರಳಿದ ‘ವೇದ ಪರಂಪರೆ’ : ಡಾ. ಅಖ್ತರ್ ಹುಸೈನ್ ಚಿತ್ರಕಲಾ ಪ್ರದರ್ಶನ

ಮಂಗಳೂರು, ಅ. 25: ರುದ್ರಾಕ್ಷಿ, ಅಶ್ಲೇಷ, ನಿರ್ಮುಕ್ತ, ಗಜಾನನ, ಕಾಳಿ, ಭೌತಿಕ, ಸಯಯೋನಿ, ಸಿಂಧೂರ, ನೃತ್ಯ, ಅಗ್ನಿಹೋಮ, ಆರೋಹ, ಚಕ್ರಾಸ್, ಸಮಾಪ್ತಿ.. ಹೀಗೆ ವೇದ ಪರಂಪರೆಯ ವೈಭವವನ್ನು ಸಾರುವ ಒಂದಕ್ಕಿಂತ ವಿಭಿನ್ನ ಚಿತ್ರಕಲೆಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ.
ಮಂಗಳೂರಿನ ಪಿವಿಎಸ್ ಬಳಿಯ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಕ್ರೇನಿಯೋಫೇಶಿಯಲ್ ಅನೇಮಲೀಸ್ ಕೇಂದ್ರದ ಆಡಳಿತ ನಿರ್ದೇಶಕ ಹಾಗೂ ಕಲಾವಿದ ಡಾ. ಅಖ್ತರ್ ಹುಸೈನ್‌ರವರ ‘ವೇದಿಕ್ ಇನ್ಸ್‌ಪಿರೇಶನ್ಸ್’ ಕಲಾ ಪ್ರದರ್ಶನ ಶನಿವಾರ ಉದ್ಘಾಟನೆಗೊಂಡಿತು.
ವೃತ್ತಿಯಲ್ಲಿ ದಂತ ವೈದ್ಯ ಹಾಗೂ ಹವ್ಯಾಸಿ ಕಲಾವಿದರಾಗಿರುವ ಡಾ. ಅಕ್ತರ್ ಹುಸೇನ್‌ರವರು ತಮ್ಮ ವೃತ್ತಿಯ ವಿನೂತನ ತಂತ್ರಜ್ಞಾನವನ್ನೇ ಉಪಯೋಗಿಸಿಕೊಂಡು ಕುಂಚದ ಮೂಲಕ ವೇದ ಪರಂಪರೆಗೆ ಹೊಸ ಸ್ಪರ್ಶವನ್ನು ನೀಡಿದ್ದಾರೆ. ಎರಡು ದಿನಗಳ ಕಲಾಪ್ರದರ್ಶನದಲ್ಲಿ ಡಾ. ಅಕ್ತರ್ ಹುಸೇನ್‌ರವರ 22 ವಿನೂತನ ಶೈಲಿಯ ಕಲಾಕೃತಿಗಳು ಪ್ರದರ್ಶಿಸಲ್ಪಡುತ್ತಿವೆ.
ಫೋಟೋಗ್ರಫಿ, ಡಿಜಿಟಲ್ ವಿನ್ಯಾಸ ಮತ್ತು ಚಿತ್ರಕಲೆ ಪ್ರದರ್ಶನದಲ್ಲಿ ಒಳಗೊಂಡಿದ್ದು, ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಅ.26ರಂದು ರಾತ್ರಿ 8ಗಂಟೆಯವರೆಗೆ ನಡೆಯುವ ಕಲಾ ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ವೇದಗಳಿಂದ ಪ್ರೇರಿತರಾಗಿ ಡಾ. ಅಕ್ತರ್‌ರವರು ಈ ಕಲಾಕೃತಿಗಳನ್ನು ರಚಿಸಿರುವುದು ಹೊಸ ಅನುಭವವನ್ನು ನೀಡಿದೆ. ಬೀಜದಿಂದ ಮೊಳಕೆಯೊಡೆಯುವ ಪರಿ, ಬಿಂದಿಯಿಂದ ಆಗುವ ಪರಿಣಾಮ, ಸಮಾಪ್ತಿಯ ಕಲ್ಪನೆ ಎಲ್ಲವೂ ವಿಭಿನ್ನವಾಗಿದ್ದು, ದೀರ್ಘ ಜ್ಞಾನದ ಜತೆಗೆ ಅಧ್ಯಯನದ ಮೂಲಕ ಕಲಾಕೃತಿಗಳನ್ನು ರಚಿಸಿರುವುದು ಅಭಿನಂದನೀಯ ಎಂದು ಹೇಳಿದರು.
‘ದಂತ ವೈದ್ಯಕೀಯದಲ್ಲಿ ಬಳಕೆ ಮಾಡುವ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ಕಳೆದ 15 ವರ್ಷಗಳಿಂದ ಈ ಹವ್ಯಾಸದಲ್ಲಿ ತೊಡಗಿಕೊಂಡಿದ್ದೇನೆ. ಅವುಗಳಲ್ಲಿ ಭಾರತದ ಐತಿಹಾಸಿಕ ವೈಭವಕ್ಕೆ ಸಾಕ್ಷಿಯಾಗಿರುವ ವೇದ ಪರಂಪರೆಯಿಂದ ಪ್ರೇರಿತನಾಗಿ, ಅಧ್ಯಯನ ಮೂಲಕ ಮಾಡಿರುವ ಕೆಲ ಕೃತಿಗಳನ್ನು ಎರಡು ದಿನಗಳ ಪ್ರದರ್ಶನದಲ್ಲಿ ಇರಿಸಲಾಗಿದೆ. ಹೊಸ ವಿಧಾನದ ಮೂಲಕ ನಮ್ಮ ದೇವಾಲಯಗಳು, ಇಲ್ಲಿನ ಪರಂಪರೆಯನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ.’
-ಡಾ. ಅಕ್ತರ್ ಹುಸೇನ್, ಕಲಾವಿದ







