ಗುಪ್ತಚರ, ಪೊಲೀಸ್ ಇಲಾಖೆಯಿಂದ ಲೋಪವಾಗಿದೆ : ಐವನ್ ಡಿಸೋಜಾ

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೋಮುದ್ವೇಷದ ಕೊಲೆ ಪ್ರಕರಣದಲ್ಲಿ ಗುಪ್ತಚರ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲವು ಲೋಪದೋಷಗಳು ಇರುವುದನ್ನು ಜನಾಭಿಪ್ರಾಯದ ಮೇಲೆ ಒಪ್ಪಿಕೊಳ್ಳುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋಮು ಪ್ರಚೋದನಕಾರಿ ಭಾಷಣ ಮಾಡುವವರು, ಕೋಮು ಗಲಭೆಗಳಿಗೆ ಕಾರಣವಾಗುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿರುವುದು ಹೌದು ಎಂದ ಅವರು ಹೇಳಿದರು.
ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ನೋಡುವಾಗ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕೋಮು ಶಕ್ತಿಗಳ ವಿರುದ್ಧದ ರಾಜ್ಯ ಸರಕಾರದ ದೃಷ್ಟಿಕೋನವನ್ನು ಪೊಲೀಸರು ಅರ್ಥ ಮಾಡಿಕೊಂಡಿಲ್ಲ ಅನ್ನಿಸುತ್ತಿದೆ. ಹೀಗಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಶಾಂತಿ ಸಭೆ ನಡೆಸಿ ಮುಂದೆ ಇಂತಹ ಘಟನೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಕ್ರಮ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಅಮಾಯಕ ಅಬ್ದುಲ್ ರಹ್ಮಾನ್ ಎಂಬವರ ಕೊಲೆ ಹಾಗೂ ಇನ್ನೋರ್ವ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನೋವು ತಂದಿದೆ. ಒಂದು ತಿಂಗಳ ಅವಧಿಯಲ್ಲಿ ಮೂರು ಕೊಲೆಗಳಾಗಿವೆ. ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಲಾಗಿದೆ. ಪೊಲೀಸ್ ಇಲಾಖೆಯು ದ್ವೇಷ ಭಾಷಣ ಮಾಡಿ ಪ್ರಚೋದನೆ ನೀಡಿ, ಇಂತಹ ಕೃತ್ಯಕ್ಕೆ ಕಾರಣವಾಗುವವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಸಂತ್ರಸ್ತ ಕುಟುಂಬದ ಮನೆಯವರನ್ನು ಇಂದು ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಬ್ಲಾಕ್ ಅಧ್ಯಕ್ಷರಾದ ಜೆ. ಅಬ್ದುಲ್ ಸಲೀಂ, ಪ್ರಕಾಶ್ ಸಾಲಿಯಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ, ಆರಿಫ್ ಬಾವ ಬಂದರ್, ವಿಕಾಸ್ ಶೆಟ್ಟಿ, ಎನ್‌ಎಸ್‌ಯಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಪಿ. ಮನುರಾಜ್, ಭಾಸ್ಕರ ರಾವ್, ಮನಪಾ ಮಾಜಿ ಸದಸ್ಯ ಸತೀಶ್ ಪೆಂಗಲ್, ಮುಖಂಡರಾದ ನಝೀರ್ ಬಜಾಲ್ ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರ ಸಾಮೂಹಿಕ ರಾಜೀನಾಮೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾ, ಈಗಾಗಲೇ ಅಲ್ಪಸಂಖ್ಯಾತ ನಾಯಕರ ಜತೆ ಮುಖ್ಯಮಂತ್ರಿ ಮಾತನಾಡಿದ್ದಾರೆ. ಜಿಲ್ಲೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮ ಆಗದ ಕಾರಣ ಅಮಾಯಕರ ಬಲಿಯಾಗಿದೆ ಎಂಬುದು ಅವರ ವಾದ. ಪೊಲೀಸ್ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಅವರು ನಮ್ಮವರು, ಪಕ್ಷದ ಸಿಪಾಯಿಗಳು. ಅವರ ನೋವಿಗೆ ರಾಜೀನಾಮೆ ನೀಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಪಕ್ಷವಾಗಿದ್ದು, ಅವರನ್ನು ಸಮಾಧಾನ ಪಡಿಸುವ ಹಾಗೂ ಅವರ ಬೇಡಿಕೆಯಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕೆಲಸವಾಗಲಿದೆ ಎಂದು ಹೇಳಿದರು.
ಕರಾವಳಿ ಜಿಲ್ಲೆಗೆ ವಿಶೇಷ ಕಾರ್ಯಪಡೆ :
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡು ಕರಾವಳಿ ಜಿಲ್ಲೆಗೆ ಹೊಸತಾಗಿ ವಿಶೇಷ ಕಾರ್ಯಪಡೆ (ಸ್ಪೆಷಲ್ ಆ್ಯಕ್ಷನ್ ಫೋರ್ಸ್) ಸ್ಥಾಪಿಸುವುದಾಗಿ ಘೋಷಿಸಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಹೇಳಿದರು.







