ಕೊಣಾಜೆ | ಅಜ್ಮೀರ್ ದರ್ಗಾಕ್ಕೆ ತೆರಳಿದ್ದ ತೌಡುಗೋಳಿಯ ವ್ಯಕ್ತಿ ಹೃದಯಾಘಾತದಿಂದ ನಿಧನ

ಕೊಣಾಜೆ: ಅಜ್ಮೀರ್ ದರ್ಗಕ್ಕೆ ತೆರಳಿದ್ದ ತೌಡುಗೋಳಿಯ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ತೌಡುಗೋಳಿಯ ಶೇಖಬ್ದುಲ್ಲ (60) ಮೃತ ವ್ಯಕ್ತಿ.
ನರಿಂಗಾನ ವರ್ಕಾಡಿ ಗಡಿ ಭಾಗ ತೌಡುಗೋಳಿಯ ನಿವಾಸಿ, ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿ ಲಿಂಬೆ ಹಣ್ಣು ವ್ಯಾಪಾರಿಯಾಗಿದ್ದ ಶೇಖಬ್ದುಲ್ಲ ಮೂರು ದಿನಗಳ ಹಿಂದೆ ತನ್ನ ಮಿತ್ರರೊಂದಿಗೆ ಮಂಗಳೂರಿನಿಂದ ಅಜ್ಮಿರ್ ದರ್ಗಾ ಪ್ರವಾಸ ಕೈಗೊಂಡಿದ್ದರು. ಶುಕ್ರವಾರ ದರ್ಗಾ ಭೇಟಿ ಬಳಿಕ ಅವರಿಗೆ ಎದೆನೋವು ಕಂಡುಬಂದಿದ್ದು ಆಸ್ಪತ್ರೆಗೆ ದಾಖಲಿಸುವ ಮುನ್ನ ಸಾವನ್ನಪ್ಪಿದ್ದಾರೆ.
ಶೇಖಬ್ದುಲ್ಲ ಅವರು ನಲ್ವತ್ತು ವರ್ಷಗಳಿಂದ ಲಿಂಬೆ ಹಣ್ಣು ವ್ಯಾಪಾರಿಯಾಗಿದ್ದು ಪ್ರತಿ ವರ್ಷವೂ ಅಜ್ಮಿರ್ ಗೆ ಪ್ರವಾಸ ಕೈಗೊಳ್ಳುತ್ತಿದ್ದರು. ಎರಡು ವರ್ಷದ ಹಿಂದೆಯೂ ಅಜ್ಮಿರ್ ನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರೂ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಅವರು ಚೇತರಿಸಿಕೊಂಡಿದ್ದರು.
ಶೇಖಬ್ದುಲ್ಲ ಅವರ ಪತ್ನಿ ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದರು. ಶೇಖಬ್ದುಲ್ಲ ಅವರ ಮೃತದೇಹವನ್ನು ಅಜ್ಮಿರ್ ನಿಂದ ಶುಕ್ರವಾರ ಮಧ್ಯಾಹ್ನ ಅಂಬುಲೆನ್ಸ್ ಮೂಲಕ ಕರೆತರಲಾಗುತ್ತಿದ್ದು ಶನಿವಾರ ಮಧ್ಯರಾತ್ರಿ ಸ್ವಗೃಹಕ್ಕೆ ತಲುಪುವ ನಿರೀಕ್ಷೆ ಇದೆ. ತೌಡುಗೋಳಿಯ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.







