ಪುತ್ತೂರು | ಕಾರು - ಅಟೋ ರಿಕ್ಷಾ ನಡುವೆ ಢಿಕ್ಕಿ: ಮೂವರಿಗೆ ಗಾಯ

ಪುತ್ತೂರು: ಕಾರು ಮತ್ತು ಆಟೋ ರಿಕ್ಷಾಗಳ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಂಜಲ್ಪಡ್ಪು ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಗಾಯಾಳುಗಳನ್ನು ಆಟೋ ರಿಕ್ಷಾ ಚಾಲಕ, ಮುಡಿಪು ಬಳಿಯ ಫಜೀರ್ ನಿವಾಸಿ ಸುನಿಲ್ ಪಿಂಟೋ(37), ಫಜೀರ್ ನಿವಾಸಿಗಳಾದ ಉಸ್ಮಾನ್(57) ಮತ್ತು ವಿದ್ಯಾರ್ಥಿನಿ ಫಾತಿಮತ್ ಮುರ್ಷಿದಾ(17) ಎಂದು ಗುರುತಿಸಲಾಗಿದೆ.
ಸುನಿಲ್ ಮತ್ತು ಉಸ್ಮಾನ್ ಅವರ ಕಾಲುಗಳಿಗೆ ತೀವ್ರ ಏಟು ತಗುಲಿದ್ದು, ಮುರ್ಷಿದಾ ಅವರ ತಲೆಗೆ ಗಾಯವಾಗಿದೆ. ಮೂವರಿಗೂ ಪುತ್ತೂರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫಜೀರ್‌ನಿಂದ ಆಟೋ ರಿಕ್ಷಾ ಬಾಡಿಗೆಗೆ ಗೊತ್ತು ಮಾಡಿಕೊಂಡು ಔಷಧಕ್ಕೆಂದು ಬಂದಿದ್ದ ಉಸ್ಮಾನ್ ಅವರು ಮರಳುವಾಗ ಪುತ್ತೂರು ಹೊರವಲಯದ ಕುಂಬ್ರದ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯತ್ತಿರುವ ತನ್ನ ಮೊಮ್ಮಗಳು ಮುರ್ಷಿದಾಳನ್ನು ಕೂರಿಸಿಕೊಂಡು ಫಜೀರ್‌ನತ್ತ ಹೋಗುತ್ತಿದ್ದರು ಎನ್ನಲಾಗಿದೆ.
ಮಂಜಲ್ಪಡ್ಪು ತಲುಪುವಾಗ ಎದುರಿನಿಂದ ಬರುತ್ತಿದ್ದ ಕಾರೊಂದು ಲಾರಿಯನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಮುಂಭಾಗದಿಂದ ಆಗಮಿಸುತ್ತಿದ್ದ ಅಟೋ ರಿಕ್ಷಾಕ್ಕೆ ಮಖಾಮುಖಿ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಕಾರು ಮತ್ತು ಆಟೋಗಳೆರಡೂ ಜಖಂಗೊಂಡಿದೆ. ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







