ಕೊಟ್ಟಾಯಂನಲ್ಲಿ ಕಾರು ಅಪಘಾತ: ಸುರತ್ಕಲ್ ಕಾನದ ಯುವಕ ಮೃತ್ಯು, ನಾಲ್ವರಿಗೆ ಗಾಯ

ಶಾನವಾಝ್ ಯಾನೆ ಶಮೀಮ್
ಸುರತ್ಕಲ್: ಕೇರಳದ ಕೊಟ್ಟಾಯಂನಲ್ಲಿ ಕಾರೊಂದು ಅಪಘಾತಕ್ಕೀಡಾಗಿ ಸುರತ್ಕಲ್ ಕಾನ ನಿವಾಸಿ ಯುವಕನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಮೂಲತಃ ಮುಲ್ಕಿ ತಾಲೂಕಿನ ಅಂಗರಗುಡ್ಡೆ ನಿವಾಸಿ, ಪ್ರಸಕ್ತ ಕಾನದ ಚಿರಾಗ್ ಫ್ಲ್ಯಾಟ್ ನಲ್ಲಿ ವಾಸವಿದ್ದ ಶಾನವಾಝ್ ಯಾನೆ ಶಮೀಮ್(32) ಮೃತಪಟ್ಟವರು.
ಇವರ ಜೊತೆ ಕಾರಿನಲ್ಲಿದ್ದ ಕಾಟಿಪಳ್ಳದ ಸಿರಾಜ್, ಕಾನ ನಿವಾಸಿ ಅಶ್ಫಾಕ್, ಸೂರಿಂಜೆ ನಿವಾಸಿ ಶಬೀರ್ ಹಾಗೂ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಸಿರಾಜ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಶಮೀಮ್ ಸೇರಿದಂತೆ ಐವರು ಕೇರಳದ ಕೊಟ್ಟಾಯಂನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಬೌನ್ಸರ್ ಗಳಾಗಿ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಇಂದು ಬೆಳಗ್ಗೆ ಉಪಹಾರ ಸೇವಿಸಲೆಂದು ಕಾರಿನಲ್ಲಿ ಪೇಟೆ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇಕ್ಕಟ್ಟಾದ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಸುಮಾರು 20 ಅಡಿ ಆಳಕ್ಕೆ ಉರುಳಿಬಿದ್ದಿದೆ ಎನ್ನಲಾಗಿದೆ.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶಾನವಾಝ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿರಾಜ್ ರಿಗೆ ಗಂಭೀರ ಗಾಯಗಾಳಾಗಿದ್ದು, ಅವರನ್ನು ಮಂಗಳೂರಿಗೆ ಕರೆತಂದು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಬೀರ್ ಸೂರಿಂಜೆ ಮತ್ತು ಅಶ್ಫಾಕ್ ಕಾನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಾರು ಚಾಲಕ ರಾಜಸ್ಥಾನ ಮೂಲದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.







