Mangaluru | ಪೆಡ್ಲರ್‌ಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆ ಸೆರೆ

ಮಂಗಳೂರು: ನಗರದ ಪೆಡ್ಲರ್‌ಗಳಿಗೆ ಬೆಂಗಳೂರಿನಿಂದ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಉಗಾಂಡ ಮೂಲದ ಜಲಿಯಾ ಝಲ್ವಾಂಗೊ ಎಂಬ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ ಜಿಗಣಿ ಸರಹದ್ದಿನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಈಕೆಯಿಂದ ಸುಮಾರು 4 ಕೋಟಿ ರೂ. ಮೌಲ್ಯದ 4 ಕೆ.ಜಿ. ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರಿನ ಆರು ಮಂದಿ ಮಾದಕ ವಸ್ತು ಪೆಡ್ಲರ್‌ಗಳು ಈಕೆಯಿಂದ ಎಂಡಿಎಂಎ ಖರೀದಿಸಿ ಮಂಗಳೂರಿನ ವಿದ್ಯಾರ್ಥಿಗಳು, ಯುವಕರು, ನಾಗರಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಮುಲ್ಕಿ ಠಾಣಾ ಪೊಲೀಸರು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಮುಹಮ್ಮದ್ ಶಿಯಾಬ್ ಯಾನೆ ಶಿಯಾಬ್ (22), ಮಂಜನಾಡಿ ಸಮೀಪದ ನರಿಂಗಾನದ ಮುಹಮ್ಮದ್ ನೌಷಾದ್ ಯಾನೆ ನೌಷಾದ್ (29), ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್ ಯಾನೆ ಇಂಬು (27), ಬಂಟ್ವಾಳದ ರಾಮಲ್ ಕಟ್ಟೆಯ ನಿಸಾರ್ ಅಹ್ಮದ್ (36) ಎಂಬವರನ್ನು ಬಂಧಿಸಿ 524 ಗ್ರಾಂ. ಎಂಡಿಎಂಎ ವಶ ಪಡಿಸಿಕೊಂಡಿದ್ದರು.
ಇನ್ನೊಂದು ಪ್ರಕರಣದಲ್ಲಿ ಸುರತ್ಕಲ್ ಠಾಣೆಯ ಪೊಲೀಸರು ಕಾಪು ಮಜೂರಿನ ಮುಹಮ್ಮದ್ ಇಕ್ಬಾಲ್ (30) ಮತ್ತು ಪಡುಬಿದಿರೆ ಸಮೀಪದ ಕಂಚಿನಡ್ಕದ ಶೆಹರಾಜ್ ಶಾರೂಕ್ (25) ಎಂಬವರನ್ನು ಬಂಧಿಸಿ 200 ಗ್ರಾಂ. ಎಂಡಿಎಂಎ ವಶಪಡಿಸಿಕೊಂಡಿದ್ದರು.
ಈ ಎರಡು ಪ್ರಕರಣದ ಆರೋಪಿಗಳ ವಿಚಾರಣೆ ವೇಳೆ ತಾವು ಬೆಂಗಳೂರಿನಿಂದ ಉಗಾಂಡ ಮೂಲದ ಜಲಿಯಾ ಝಲ್ವಾಂಗೊ ಎಂಬಾಕೆಯಿಂದ ಖರೀದಿಸಿ ತರುತ್ತಿದ್ದುದಾಗಿ ತಿಳಿಸಿದ್ದರು. ಅದರಂತೆ ಮಂಗಳೂರು ಸಿಸಿಬಿ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಮುಲ್ಕಿ ಮತ್ತು ಸುರತ್ಕಲ್ ಠಾಣೆಯ ಪೊಲೀಸರು ಬಂಧಿಸಿದ ಆರು ಮಂದಿ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮಂಗಳೂರು ನಗರ ವ್ಯಾಪ್ತಿಯಲ್ಲೂ ಎಂಡಿಎಂಎ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಈ ಜಾಲವನ್ನು ಬಂಧಿಸುವ ಮೂಲಕ ಅದರ ಮೂಲವನ್ನೇ ನಾಶ ಪಡಿಸಿದಂತಾಗಿದೆ. ಆರು ಜನ ಪೆಡ್ಲರ್‌ಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿ ಮಹಿಳೆಗೂ ನ್ಯಾಯಾಂಗ ಬಂಧನವಾಗಿದೆ. ಈಕೆಯನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.







