ಉಜಿರೆ: ರಾಮೋತ್ಸವ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು

ಬೆಳ್ತಂಗಡಿ: ಉಜಿರೆಯ ಕೃಷ್ಣಾನುಗ್ರಹದ ಸಭಾಭವನದಲ್ಲಿ ಎ.19 ರಂದು ಸಂಜೆ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೂಲಿಬೆಲೆ ಆಗಮಿತಿ ಭಾಷಣ ಮಾಡಲಿದ್ದು, ಈ ಕಾರ್ಯಕ್ರಮ ವೀಕ್ಷಿಸಲು ಪುನೀತ್ ಕೆರೆಹಳ್ಳಿ ಬರುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ಉಜಿರೆಯ ಕಾಲೇಜ್ ರಸ್ತೆಯಲ್ಲಿ ಅಡ್ಡಹಾಕಿ ದಕ್ಷಿಣ ಕನ್ನಡ ಪ್ರವೇಶ ನಿಷೇಧ ಮಾಡಿದ ಡಿಸಿ ಆದೇಶ ತೋರಿಸಿ ಹಿಂದಕ್ಕೆ ಕಳುಹಿಸಿದ್ದಾರೆ.
ಸೌಜನ್ಯ ಪರ ಹೊರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಹಾಗೂ ಪುನೀತ್ ಕೆರೆಹಳ್ಳಿ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಸಮರ ನಡೆದಿತ್ತು. ಪುನೀತ್ ಕೆರೆಹಳ್ಳಿ ಉಜಿರೆಗೆ ಬಂದರೆ ಗಲಭೆಯಾಗುವ ಸಾಧ್ಯತೆಯಿದ್ದು, ಇದನ್ನು ಗಮನಿಸಿದ ಬೆಳ್ತಂಗಡಿ ಪೊಲೀಸರು ಪುನೀತ್ ಕೆರೆಹಳ್ಳಿಗೆ ಉಜಿರೆಗೆ ಪ್ರವೇಶ ನಿಷೇಧಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯವರು ಅದೇಶ ಹೊರಡಿಸಿದ್ದರು.
ಇಂದು ತನ್ನ ಬೆಂಬಲಿಗರೊಂದಿಗೆ ಆಗಮಿಸಿದ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪೊಲೀಸರು ಪುನೀತ್ ಹಾಗೂ ತಂಡವನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಬರುವ ಮಾಹಿತಿ ತಿಳಿದು ಮಹೇಶ್ ಶೆಟ್ಟಿ ಬೆಂಬಲಿಗರು ಉಜಿರೆಯಲ್ಲಿ ಜಮಾಯಿಸಿದ್ದರು. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ.









