‘ಹಲಸು ಹಬ್ಬ’ದಲ್ಲಿ ವೈವಿಧ್ಯತೆಯ ಅನಾವರಣ

ಮಂಗಳೂರು, ಮೇ 24: ಸಾವಯವ ಕೃಷಿಕ ಬಳಗ ಮಂಗಳೂರು ವತಿಯಿಂದ ಆಯೋಜಿಸಲಾಗಿರುವ ‘ಹಲಸು ಹಬ್ಬ’ದಲ್ಲಿ ಹಲಸಿನ ಹಣ್ಣುಗಳ ವೈವಿಧ್ಯತೆಯ ಜತೆಗೆ ಹಲಸಿನ ವೈವಿಧ್ಯಮಯ ಖಾದ್ಯಗಳೂ ಅನಾವರಣಗೊಂಡಿವೆ.
ಶ್ರೀ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಹಾಲ್‌ನಲ್ಲಿ ಶನಿವಾರ ಮತ್ತು ರವಿವಾರ ನಡೆಯಲಿರುವ ಹಲಸಿನ ಹಬ್ಬದಲ್ಲಿ ಹಲಸಿನಿಂದ ತಯಾರಿಸಿದ ಕೇಕ್, ಶೀರ, ಕಬಾಬ್, ಮುಳ್ಕ, ಗಾರಿಗೆ, ಪೋಡಿ ಹಾಗೂ ಅತ್ಯಂತ ಜನಪ್ರಿಯವಾಗಿರುವ ಹಲಸಿನ ಬಿಸಿ ಬಿಸಿ ಹೋಳಿಗೆಯೂ ಲಭ್ಯವಿದೆ.
ಕಳೆದ 8 ವರ್ಷಗಳಿಂದ ನಡೆಸಲಾಗುತ್ತಿರುವ ಹಲಸಿನ ಮೇಳ ವರ್ಷದಿಂದ ವರ್ಷಕ್ಕೆ ಅಧಿಕ ಸಂಖ್ಯೆಯ ಹಲಸು ಪ್ರಿಯರನ್ನು ಆಕರ್ಷಿಸುತ್ತಿದೆ. ಸ್ಥಳೀಯವಾಗಿ ಬೆಳೆಯುವ ಹಲಸಿನ ಜತೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಯುವ ವಿವಿಧ ಗಾತ್ರ, ಬಣ್ಣ ಹಾಗೂ ಜಾತಿಯ ಹಲಸಿನ ಹಣ್ಣುಗಳನ್ನು ರೈತರು ಈ ಮೇಳದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ 12 ಟನ್ ಹಲಸಿನ ಹಣ್ಣು ಮಾರಾಟವಾಗಿದ್ದು, ಎರಡನೆ ದಿನ ಬಹಳಷ್ಟು ಹಲಸು ಪ್ರಿಯರಿಗೆ ಹಲಸು ಸಿಗದೆ ನಿರಾಶೆಯಾಗಿತ್ತು. ಆ ಕಾರಣದಿಂದ ಈ ವರ್ಷ 15 ಟನ್ ಹಲಸಿನ ಹಣ್ಣನ್ನು ತರಿಸಲಾಗಿದೆ ಎಂದು ಬಳಗದ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ತಿಳಿಸಿದ್ದಾರೆ.
42 ಮಳಿಗೆಗಳಲ್ಲಿ ವಿವಿಧ ರೀತಿಯ ಹಲಸಿನ ಹಣ್ಣಿನ ಉತ್ಪನ್ನಗಳ ಜತೆಗೆ ಸೊಪ್ಪು, ಗೆಡ್ಡೆ ಗೆಣಸು ಹಾಗೂ ತರಕಾರಿಗಳ ಮಾರಾಟವನ್ನೂ ಆಯೋಜಿಸಲಾಗಿದೆ. ಹಲಸಿನ ವಿವಿಧ ತಿಂಡಿ ತಿನಿಸುಗಳ ಜತೆಗೆ ಹಲಸಿನ ಹಣ್ಣಿನ ಬೀಜ ಮತ್ತು ಹುರುಳಿ ಕಾಳುಗಳನ್ನು ಉಪಯೋಗಿಸಿ ತಯಾರಿಸಿದ ಚಕ್ಕಲಿ ಕೂಡಾ ತಿಪಟೂರಿನ ಮೋಹನ್ ಕುಮಾರ್ ಮತ್ತು ಶಶಿಕಲಾ ಅವರ ಮಳಿಗೆಯಲ್ಲಿ ಲಭ್ಯವಿದೆ. ತುಮಕೂರು ತಿಪಟೂರಿನ ರೈತ ಮೋಹನ್ ಕುಮಾರ್ ಅವರು ಮಂಗಳೂರಿನಲ್ಲಿ ಅತೀ ಬೇಡಿಕೆಯ ಚಂದ್ರ ಹಲಸಿನೊಂದಿಗೆ ಕಳೆದ 5 ವರ್ಷಗಳಿಂದ ಹಲಸು ಮೇಳದಲ್ಲಿ ಭಾಗವಹಿಸುತ್ತಿದ್ದಾರೆ.
‘ಕಳೆದ ವರ್ಷ 1.5 ಟನ್ ಹಲಸು ತಂದಿದ್ದೆ. ಒಂದೇ ದಿನದಲ್ಲಿ ಖಾಲಿಯಾಗಿತ್ತು. ಈಬಾರಿ 2 ಟನ್ ತಂದಿದ್ದೇನೆ. ಮಂಗಳೂರಿಗರಿಗೆ ಚಂದ್ರ ಹಲಸು ಎಂದರೆ ತುಂಬಾ ಇಷ್ಟ. ಕೇಳಿಕೊಂಡು ಬರುತ್ತಾರೆ. ಇದು ನೋಡಲು ಬಣ್ಣದಲ್ಲಿ ಮಾತ್ರವಲ್ಲದೆ ರುಚಿಯಲ್ಲೂ ಸಿಹಿ. ಬಿಡಿಸಿದ ಹಣ್ಣು ಕೆಜಿಗೆ 400 ರೂ.ನಂತೆ, ಕಟ್ ಮಾಡಿದ ಹಣ್ಣು ಕೆಜಿಗೆ 200 ರೂ. ಹಾಗೂ ಇಡೀ ಹಲಸು ಕೆಜಿಗೆ 100 ರೂ.ನಂತೆ ಮಾರಾಟ ಮಾಡಲಾಗುತ್ತಿದೆ’ ಎಂದು ಮೋಹನ್ ಕುಮಾರ್ ತಿಳಿಸಿದರು.
ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಟ ಸ್ವರಾಜ್ ಶೆಟ್ಟಿ ಹಾಗೂ ದೇಸಿ ಭತ್ತದ ತಳಿಯ ಸಂರಕ್ಷಕಿ ಅಸ್ಮಾ ಬಾನು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಜಿ.ಆರ್. ಪ್ರಸಾದ್ ವಹಿಸಿದ್ದರು.
ಬಳಗದ ಗೌರವ ಮಾರ್ಗದರ್ಶಕ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್ ಉಪಸ್ಥಿತರಿದ್ದರು. ಹಲಸು ತಳಿ ಸಂಶೋಧಕ, ನಿವೃತ್ತ ಅರಣ್ಯಾಧಿಕಾರಿ ಗ್ಯಾಬ್ರಿಯಲ್ ಸ್ಟ್ಯಾನಿ ವೇಗಸ್ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಹಲಸು ಹಬ್ಬದಲ್ಲಿ ಈ ಬಾರಿ ವಿಶೇಷವಾಗಿ ಸಾರ್ವಜನಿಕರಿಗೆ ಹಲಸಿನ ತೊಳೆ ಬಿಡಿಸುವುದು ಸೇರಿದಂತೆ ಹಲವು ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

















