VITTAL | ಅಂಗನವಾಡಿಗೆ ತೆರಳುತ್ತಿದ್ದ ಮಗುವಿನ ಮೇಲೆ ಬೀದಿನಾಯಿ ದಾಳಿ: ತೀವ್ರ ಗಾಯ

ವಿಟ್ಲ: ಅಂಗನವಾಡಿಗೆ ತೆರಳುತ್ತಿದ್ದ ಮಗುವಿನ ಮೇಲೆ ಬೀದಿನಾಯಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಬೋಳಂತೂರು ನಾರ್ಶ ಬಂಗಾರಕೋಡಿ ನಿವಾಸಿ ರಿಯಾಝ್ ಎಂಬವರ ಪುತ್ರಿ ರಿಜಿಲಾ ಸಾರಮ್ಮ ಗಾಯಗೊಂಡ ಮಗು.
ಮನೆಯ ಸಮೀಪವೇ ಅಂಗನವಾಡಿ ಕೇಂದ್ರವಿದ್ದು, ಗುರುವಾರ ಬೆಳಗ್ಗೆ ರಿಜಿಲಾ ಒಬ್ಬಳೇ ಅಂಗನವಾಡಿಗೆಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೀದಿನಾಯಿಯೊಂದು ಏಕಾಏಕಿ ದಾಳಿ ಮಾಡಿದೆ.
ಇದರಿಂದ ಮಗುವಿನ ಮುಖ ಸಹಿತ ಇಡೀ ದೇಹದ ಮೇಲೆ ತೀವ್ರ ಗಾಯಗಳಾಗಿವೆ. ಮುಖದ ಮೇಲೆ ತೀವ್ರತರದ ಗಾಯಗಳಾಗಿದ್ದು, ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Next Story




