ವಿಟ್ಲ: ಇಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ; ಅಪಾರ ನಷ್ಟ

ವಿಟ್ಲ: ಇಲ್ಲಿನ ಮಂಗಳೂರು ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಬುಧವಾರ ಆಕಸ್ಮಿಕವಾಗಿ ಕಾಣಿಸಿಕೊಂಡ ಭೀಕರ ಬೆಂಕಿಯು ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮಳಿಗೆಗಳಿಗೂ ವ್ಯಾಪಿಸಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಸಂತೋಷ್ ಕುಮಾರ್ ಕೊಡಂಗೆ ಅವರ ಮಾಲಕತ್ವದ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿ ಕೊಂಡಿದೆ. ಅಂಗಡಿಯೊಳಗಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳಿಂದಾಗಿ ಜ್ವಾಲೆಯ ತೀವ್ರತೆ ಏಕಾಏಕಿ ಹೆಚ್ಚಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬಾರದ ಮಟ್ಟಿಗೆ ಅಗ್ನಿಶಾಮಕ ಜ್ವಾಲೆ ಅಬ್ಬರಿಸಿದೆ.
ಇಲೆಕ್ಟ್ರಾನಿಕ್ಸ್ ಅಂಗಡಿಯಿಂದ ಹಬ್ಬಿದ ಬೆಂಕಿ ಪಕ್ಕದಲ್ಲೇ ಇದ್ದ ಸಣ್ಣಪುಟ್ಟ ಅಂಗಡಿಗಳನ್ನು ಆವರಿಸಿದೆ. ಸದ್ಯ ಬೆಂಕಿಯ ಕೆನ್ನಾಲಗೆಯು ಸಮೀಪದ ಅಮಿತ್ ಹೋಟೆಲ್ ವರೆಗೂ ವಿಸ್ತರಿಸಿದ್ದು, ಹೋಟೆಲ್ ಮತ್ತು ಇತರ ಮಳಿಗೆಗಳಿಗೂ ಭಾರೀ ಹಾನಿಯಾಗಿದೆ ಎಂದು ವರದಿಯಾಗಿದೆ.
ಬಳಿಕ ಬೆಂಕಿ ಸ್ಟಾರ್ ವೈನ್ಸ್ ವರೆಗೂ ವಿಸ್ತರಣೆಯಾಗಿದ್ದು, ಇದರ ನಡುವೆ ಇದ್ದ ಎಸ್. ಬಿ. ಟೈಲರಿಂಗ್ ಶಾಪ್, ಪಡೀಲ್ ಪಾಸ್ಟ್ ಫುಡ್, ಸಹಿತ ಸಣ್ಣ ಅಂಗಡಿಗಳೂ ಬೆಂಕಿಗೆ ಆಹುತಿಯಾಗಿದೆ. ಬಂಟ್ವಾಳದಿಂದ ಅಗ್ನಿಶಾಮಕ ವಾಹನ ಬಂದಿದ್ದು, ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಕಿಯ ರೌದ್ರಾವತಾರಕ್ಕೆ ಸಿಲುಕಿ ಹಲವು ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಬಂಟ್ವಾಳದಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಆದರೆ, ಬೆಂಕಿಯ ತೀವ್ರತೆ ಅತಿಯಾಗಿರುವುದರಿಂದ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.







