ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನಿನಲ್ಲಿರುವ ಷರತ್ತುಗಳೇನು?

ಮಂಗಳೂರು : ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳ ವಿರುದ್ದ ಅವಹೇಳನಕಾರಿ ಧ್ವೇಷ ಭಾಷಣ ಮಾಡಿದ್ದ ಆರೋಪ ಎದುರಿಸುತ್ತಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಡಿಸೆಂಬರ್ 10 ರಂದು ನಿರಿಕ್ಷಣಾ ಜಾಮೀನು ನೀಡಿದ್ದು, ಹಲವು ಷರತ್ತುಗಳನ್ನು ವಿಧಿಸಿದೆ. ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್ ಪ್ರತೀ ಗುರುವಾರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಿದೆ. ಇಲ್ಲದೇ ಇದ್ದರೆ ಜಾಮೀನು ರದ್ದಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಲಯ ವಿಧಿಸಿದ ಷರತ್ತುಗಳ ಸಾರಾಂಶ ಇಲ್ಲಿದೆ:
ಆರೋಪಿ ಪ್ರಭಾಕರ ಭಟ್ BNSS ಕಲಂ 482 ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯ ಕ್ರೈಂ ನಂ.118/2025 ಪ್ರಕರಣದಲ್ಲಿ ಆರೋಪಿ ಹಾಜರಾಗಿ ಬಂಧನ ಪ್ರಕ್ರಿಯೆ ನಡೆಸಿ ಬಿಡುಗಡೆಗೊಳಿಸುವಾಗ 50,000 ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಒಬ್ಬ ಜಾಮೀನುದಾರರನ್ನು ಪಡೆದುಕೊಂಡು ಬಿಡುಗಡೆ ಮಾಡಬೇಕು.
ಆರೋಪಿಯು 20 ದಿನಗಳಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಮುಂದೆ ಶರಣಾಗಬೇಕು. ಆರು ತಿಂಗಳ ಅವಧಿಗೆ, ಪ್ರತೀ ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ತನಿಖಾ ಅಧಿಕಾರಿಯ ಮುಂದೆ ಹಾಜರಾಗಬೇಕು ಮತ್ತು ತನಿಖೆಗೆ ಸಹಕರಿಸಬೇಕು.
ದೂರುದಾರರನ್ನು ಅಥವಾ ಇತರ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಬೆದರಿಸಬಾರದು ಹಾಗೂ ನೇರ ಅಥವಾ ಪರೋಕ್ಷವಾಗಿ ಸಾಕ್ಷ್ಯ ತೊಂದರೆಗೊಳಿಸಬಾರದು. ನ್ಯಾಯಾಲಯದಲ್ಲಿ ಎಲ್ಲಾ ದಿನಾಂಕಗಳಿಗೆ ನಿಯಮಿತವಾಗಿ ಹಾಜರಾಗಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಇನ್ನು ಮುಂದೆ ಇದೇ ರೀತಿಯ ಅಪರಾಧಗಳಲ್ಲಿ ತೊಡಗಿಸಿಕೊಳ್ಳಬಾರದು.
ಈ ಆದೇಶ ಹೊರಟ ದಿನದಿಂದ 20 ದಿನಗಳೊಳಗೆ ಸ್ವಯಂ ಬಾಂಡ್ ಮತ್ತು ಜಾಮೀನಿದಾರರನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
ನಿಖಾ ಅಧಿಕಾರಿ ಹಾಗೂ ನ್ಯಾಯಾಲಯಕ್ಕೆ ವಿಳಾಸದ ಗುರುತು ಪತ್ರವನ್ನು ಸಲ್ಲಿಸಬೇಕು. ಈ ಮೇಲಿನ ಯಾವುದೇ ಷರತ್ತು ಉಲ್ಲಂಘನೆಯಾದಲ್ಲಿ ಜಾಮೀನು ರದ್ದಾಗುತ್ತದೆ.
ಇನ್ನು ಮುಂದೆ ಆರು ತಿಂಗಳು ಪ್ರತೀ ಗುರುವಾಗ ಠಾಣೆಗೆ ಹಾಜರಾಗದಿದ್ದಲ್ಲಿ ಜಾಮೀನು ರದ್ದಾಗಲಿದೆ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಈವರೆಗೆ 12 ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿದೆ.
ಪ್ರಕರಣವೇನು?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಧ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜರವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪ್ರಭಾಕರ ಭಟ್ ಮತ್ತು ದೀಪೋತ್ಸವ ಕಾರ್ಯಕ್ರಮ ಆಯೋಜಕರ ವಿರುದ್ಧ ಪೊಲೀಸರು ಬಿಎನ್‌ಎಸ್-2023ರ ಸೆಕ್ಷನ್ 79, 196, 299, 302 ಹಾಗೂ 3(5) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ದೂರುದಾರರಾಗಿರುವ ಈಶ್ವರಿ ಪದ್ಮುಂಜ ಪರವಾಗಿ ಆರೋಪಿ ಪ್ರಭಾಕರ ಭಟ್ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಲು ಮತ್ತು ವಾದ ಮಾಡಲು ಅವಕಾಶ ಕೊಡಬೇಕು’ ಎಂದು ಹಿರಿಯ ವಕೀಲ ಸತೀಶನ್ ಅವರು ಬಿಎನ್‌ಎಸ್‌ಎಸ್ ಸೆಕ್ಷನ್ 338 - 339 ಅರ್ಜಿ ಹಾಕಿದ್ದರು. ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಸತೀಶನ್ ಅವರಿಗೆ ವಾದ ಮಾಡಲು ಮತ್ತು ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಈ ಮಧ್ಯೆ ಸರ್ಕಾರಿ ವಕೀಲರು ಪ್ರಭಾಕರ ಭಟ್ ಅವರ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಿದರು. ದೂರುದಾರರಾಗಿರುವ ಈಶ್ವರಿ ಪದ್ಮುಂಜ ಅವರ ವಕೀಲರು ಪ್ರಭಾಕರ ಭಟ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿ ಹತ್ತಾರು ಪುಟಗಳ ಸುಧೀರ್ಘ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಪ್ರಭಾಕರ ಭಟ್ ಮೇಲಿದ್ದ 13 ಪ್ರಕರಣಗಳ ಇತಿಹಾಸ, ಸುಪ್ರಿಂ ಕೋರ್ಟ್ ತೀರ್ಪುಗಳನ್ನು ಹಿರಿಯ ವಕೀಲ ಸತೀಶನ್ ನ್ಯಾಯಾಲಯಕ್ಕೆ ಒದಗಿಸಿದ್ದರು.
ಇದರ ಆಧಾರದಲ್ಲಿ ಹಲವು ಷರತ್ತುಗಳನ್ನು ವಿಧಿಸಿ ಪ್ರಭಾಕರ ಭಟ್ ಗೆ ನ್ಯಾಯಾಲಯ ಜಾಮೀನು ನೀಡಿದೆ.







