ಕಾವೂರು | ಯುವಕನ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಕಾವೂರು, ಆ.22: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ವಿ. ಶೆಟ್ಟಿ ಕಾಲೇಜು ರೋಡ್ ಬಳಿ ಕೋಮುಗಲಭೆ ಸೃಷ್ಟಿಸುವ ದುರುದ್ದೇಶದಿಂದ ವ್ಯಕ್ತಿಯೊಬ್ಬರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಮೂವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಕೂಳೂರು ಪಂಜಿಮೊಗರು ಉರುಂದಾಡಿ ಗುಡ್ಡೆ ಧನುಷ್ ಗ್ರೌಂಡ್ ಬಳಿಯ ನಿವಾಸಿ ಚರಣ್ ರಾಜ್ ಯಾನೆ ಚರಣ್ ಉರುಂಬಾಡಿಗುಡ್ಡೆ (23), ಸುರತ್ಕಲ್ ಹೊಸಬೆಟ್ಟು ಮಾಸ್ಟರ್ ಐಸ್ ಪ್ಲಾಂಟ್ ಬಳಿಯ ನಿವಾಸಿ ಸುಮಂತ್ ಬರ್ಮನ್(24), ಕೋಡಿಕಲ್ ಸುಂಕದಕಟ್ಟೆ ಕಲ್ಲಬಾವಿ ರೋಡ್ 1ನೇ ಅಡ್ಡರಸ್ತೆಯ ನಿವಾಸಿ ಅವಿನಾಶ್ (24) ಬಂಧಿತ ಆರೋಪಿಗಳು. ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಗಳಲ್ಲಿ ಕಾವೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ತಲವಾರು, ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ: ಕಾವೂರು ಶಾಂತಿನಗರ ನಿವಾಸಿ ಶುಐಬ್ (28) ಎಂಬವರು ರವಿವಾರ ರಾತ್ರಿ ತನ್ನ ಮನೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳ ತಂಡ ಸ್ಕೂಟರ್ ನಲ್ಲಿ ಮಾರಕಾಸ್ತ್ರದೊಂದಿಗೆ ಬಂದು ಅಡ್ಡಗಟ್ಟಿ ಏಕಾಏಕಿ ದಾಳಿಗೆ ಮುಂದಾಗಿತ್ತು.ಈ ವೇಳೆ ಶುಐಬ್ ಅವರಿಂದ ತಪ್ಪಿಸಿಕೊಂಡು ಓಡಿದಾಗ ದುಷ್ಕರ್ಮಿಗಳು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಶುಐಬ್ ಅವರ ಕಣ್ಣಿನ ಮೇಲ್ಭಾಗಕ್ಕೆ ಗಾಯಗಳಾಗಿದ್ದು, ಅವರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಶುಐಬ್ ಅವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕೃತ್ಯ ಎಸಗಿದ 24 ಗಂಟೆಯ ಒಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳ ಪೈಕಿ ಚರಣ್ ರಾಜ್ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ 1, ಪಣಂಬೂರು ಪೊಲೀಸ್ ಪೊಲೀಸ್ ಠಾಣೆಯಲ್ಲಿ 3, ಕಾವೂರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿ 5 ಪ್ರಕರಣಗಳಿದ್ದು, ಈತನ ವಿರುದ್ಧ ಮಂಗಳೂರು ನಗರ ಪೊಲೀಸರು ರೌಡಿ ಶೀಟ್ ತೆರೆದಿದ್ದಾರೆ ಎಂದು ತಿಳಿದು ಬಂದಿದೆ.
ಸುಮಂತ್ ಬರ್ಮನ್ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ-1, ಬರ್ಕೆ ಪೊಲೀಸ್ ಠಾಣೆಯಲ್ಲಿ-1 ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ-2 ಪ್ರಕರಣಗಳು ಸೇರಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ.
ಪ್ರಶಾಂತ್ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಗಳಲ್ಲಿ ತಲಾ 1 ಸೇರಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು, ಈತನನ್ನು ಉರ್ವಾ ಪೊಲೀಸ್ ಠಾಣೆಯಿಂದ ಗಡಿಪಾರು ಮಾಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಎಸಿಪಿ ಮನೋಜ್ ಕುಮಾರ್ ಅವರ ಸಲಹೆಯಂತೆ ಕಾವೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.







