ದಾವಣಗೆರೆ | ವಿವಾದಿತ ಬ್ಯಾನರ್ ಅಳವಡಿಕೆ ಪ್ರಕರಣ; ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕದಂತೆ ಎಚ್ಚರಿಕೆ

PC : freepik
ದಾವಣಗೆರೆ, ಸೆ.26: ಕಾರ್ಲ್ ಮಾರ್ಕ್ಸ್ ನಗರದ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ಗಳನ್ನು ಹಾಕದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಎರಡು ಸಮುದಾಯಗಳ ಮುಖಂಡರಿಗೆ ಶಾಂತಿ ಸೌಹಾರ್ದ ಕಾಪಾಡುವಂತೆ ಸೂಚನೆ ನೀಡಲಾಗಿದೆ. ನಾಗರಿಕರು ನಗರದ ಸಾಮರಸ್ಯ ಕಾಪಾಡಲು ದಾವಣಗೆರೆ ಜಿಲ್ಲಾ ಪೊಲೀಸ್ ಜೊತೆಯಲ್ಲಿ ಸಹಕರಿಸಬೇಕು ಹಾಗೂ ಯಾವುದೇ ಸಮುದಾಯದ ಮುಖಂಡರು ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ, ಪೋಸ್ಟರ್ಗಳನ್ನು ಹಾಕಬಾರದು. ಒಂದು ವೇಳೆ ಹಾಗೇನಾದರೂ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
ಸೆ.24ರಂದು ರಾತ್ರಿ ದಾವಣಗೆರೆ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ವಾಗ್ವಾದ ನಡೆದ ಘಟನಾ ಸ್ಥಳಕ್ಕೆ ಪೂರ್ವ ವಲಯ ಐಜಿಪಿ ಡಾ. ರವಿಕಾಂತೇಗೌಡ ಹಾಗೂ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ, ಎರಡು ಸಮುದಾಯಗಳ ದೂರುಗಳ ಮೇಲೆ ಪರಿಶೀಲನೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈಗಾಗಲೇ 7 ಆರೋಪಿತರನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.







