ಭ್ರಷ್ಟಾಚಾರ, ಅಸಮಾನತೆಯಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ : ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಸಾಣೇಹಳ್ಳಿ ಶ್ರೀ

ಜಗಳೂರು : ಸಮಾಜದಲ್ಲಿನ ವ್ಯಾಪಕ ಭ್ರಷ್ಟಾಚಾರ, ಅಸಮಾನತೆಯಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ದೊಣೆಹಳ್ಳಿ ದಾಸೋಹ ಮಠದಲ್ಲಿ ದಾಸೋಹ ಸಂಸ್ಕೃತಿ ಉತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಸಂರಕ್ಷಣಾ ಸಮಾವೇಶ’ದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಆಡಳಿತ ವ್ಯವಸ್ಥೆಯಿಂದ ಬಡವರು ಶ್ರೀಮಂತರ ಮಧ್ಯೆ ಆರ್ಥಿಕ ಅಸಮಾನತೆಗೆ ಕಾರಣವಾಗಿದೆ. ಬಲ್ಲಿದನ ದಬ್ಬಾಳಿಕೆಯಿಂದ ದುಡಿಯುವ ವರ್ಗದವರು ಬಡವರಾಗಿಯೇ ಉಳಿಯುತ್ತಿದ್ದಾನೆ. ಸಂವಿಧಾನ ಬದ್ಧ ಸಮಾನತೆಯ ಹಕ್ಕುಗಳು ಅನ್ವಯವಾಗುತ್ತಿಲ್ಲ. ಪ್ರಜಾಪ್ರತಿನಿಧಿಗಳು ಅಧಿಕಾರ ದಾಹದಿಂದ ಕೋಟಿ ಕೋಟಿ ರೂ. ಲೂಟಿ ಹೊಡೆಯದೆ ಜನರ ಸುಖ ದುಖಃಗಳಿಗೆ ಭಾಗಿಯಾಗುವುದನ್ನು ಮೈಗೂಡಿಸಿಕೊಂಡು ಸಮಾಜದ ಋಣ ತೀರಿಸಬೇಕೆಂದು ಸಲಹೆ ನೀಡಿದರು.
ನೈತಿಕ ನೆಲೆಗಟ್ಟಿನ ಮೇಲೆ, ಸಾರ್ವಜನಿಕ ಪ್ರಜ್ಞೆಗೆ ಮನ್ನಣೆ ನೀಡುವ ದಾಸೋಹ ಸಂಸ್ಕೃತಿ ಅಗತ್ಯವಿದೆ. ಸಮಾಜದಲ್ಲಿನ ಅನಾಚಾರ ಖಂಡಿಸದಿದ್ದರೆ ನಾವೂ ಅದರ ಪಾಲುದಾರರಾಗಬೇಕಾಗುತ್ತೇವೆ. ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಬೇಕಿದೆ. ಕೇವಲ ವೇಷ ಭಾಷೆಯಿಂದ ಮಾತ್ರವಲ್ಲದೆ ಅರಿವು ಆಚಾರ ರೂಢಿಸಿಕೊಂಡರೆ ವ್ಯಕ್ತಿಯು ಸಮಾಜಕ್ಕೆ ಶಕ್ತಿಯಾಗುತ್ತಾನೆ ಅಭಿಪ್ರಾಯಿಸಿದರು.
ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿಲ್ಲಪ್ಪ ಮಾತನಾಡಿ, ದೇಶದ ಸಾಂಪ್ರದಾಯಿಕ ಸಮಾಜ ಬದಲಾಗಿ ಕಾನೂನು ಸಮಾಜ ನಿರ್ಮಾಣವಾಗಬೇಕಿದೆ. ಸಂವಿಧಾನ ದೇಶದ ಪವಿತ್ರ ಗ್ರಂಥವಾಗಿದೆ. ಕಾನೂನನ್ನು ಗೌರವಿಸದಿದ್ದರೆ ಸಮಾಜದ ಅಭಿವೃದ್ಧಿ ಅಸಾಧ್ಯ.ಸಾರ್ವಜನಿಕರೇ ಕಾನೂನು ಅಸ್ತ್ರಗಳನ್ನು ಬಳಸುವ ಹೊಣೆಗಾರಿಕೆ ಹೊಂದಬೇಕು. ನಮ್ಮ ಪ್ರಗತಿಗೆ ವರ್ತಮಾನದ ಆಲೋಚನೆ ಅಗತ್ಯವಿದೆ. ಸಂವಿಧಾನ ಎಂದರೆ ಸಮಾನ ಅವಕಾಶವಾಗಬೇಕು. ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ರೂಪಿಸಬೇಕು. ಎಲ್ಲಾ ವರ್ಗದವರಿಗೆ ಇಂದಿಗೂ ಸಾಮಾಜಿಕ ಸಮಾನತೆ, ನ್ಯಾಯ ಸಿಗುತ್ತಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ಮುರಿದುಹಾಕುತ್ತಿರುವುದು ಬೇಸರದ ಸಂಗತಿ ಎಂದರು.
ಜಿ.ಬಿ.ವಿನಯ ಕುಮಾರ್ ಮಾತನಾಡಿದರು.
ಇದೇ ವೇಳೆ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾವೇಶದಲ್ಲಿ ದೊಣೆಹಳ್ಳಿ ದಾಸೋಹ ಮಠದ ಸಂಚಾಲಕ ಗುರುಮೂರ್ತಿ, ಕಾನಾಮಡುಗು ಮಠದ ಐಮಡಿ ಶರಣಾರ್ಯರು, ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ.ಬಸವರಾಜ್, ಕಾರ್ಮಿಕ ಸಂಘಟನೆ ಮುಖಂಡ ಶಿವಶಂಕರ್, ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣ, ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ಎಲ್.ಎಚ್.ಅರುಣ್ ಕುಮಾರ್, ಲಂಕೇಶ್ ಪತ್ರಿಕೆ ಹಿರಿಯ ವರದಿಗಾರ ಅರಕೆರೆ ಸಿದ್ದಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಪ್ರೋ.ಜಯಲಕ್ಷ್ಮೀ, ಸ್ಮಿತಾ, ಶರಣಬಸವೇಶ್ವರ ಡಿ.ಎಡ್ ಕಾಲೇಜು ಪ್ರಾಂಶುಪಾಲ ಎಲ್.ಪಿ.ಸುಭಾಷ್ ಚಂದ್ರ, ಉಪನ್ಯಾಸಕರಾದ ಭದ್ರಪ್ಪ, ಪ್ರಕಾಶ್, ಮನೋಜ್, ಶರತ್, ದಾದಾ ಖಲಂದರ್, ಮುಖಂಡರಾದ ಆವರೆಗರೆ ರುದ್ರಮುನಿ ಹಾಗೂ ಇತರರು ಉಪಸ್ಥಿತರಿದ್ದರು.
ದೇಶದಲ್ಲಿ 4,600 ಜಾತಿಗಳಿವೆ, ಜಾತಿಗೊಂದು ಕಸುಬುಗಳಿವೆ. ಅಂತರ್ಜಾತಿ ವಿವಾಹಗಳಿಗೆ ಕಟ್ಟುಪಾಡುಗಳಿವೆ. ಒಂದೇ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶವಿಲ್ಲ. ಜಾತಿ ಮತ್ತು ಕಸುಬು ವಂಶಪರಂಪರೆಯಾಗಿ ಮಾಡಿದ್ದಾರೆ.ಜಾತಿ-ಜಾತಿ ನಡುವೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಸಮಾನತೆಗಳಿವೆ. ದೇಶದಲ್ಲಿನ ಜಾತಿಯ ಸಮಾನತೆಯನ್ನು ಅರ್ಥ ಮಾಡಿಕೊಂಡರೆ ಸಂವಿಧಾನ ಅರ್ಥವಾಗುತ್ತದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಶೇ.18ರಷ್ಟಿದ್ದ ಅಕ್ಷರಸ್ಥರ ಸಂಖ್ಯೆ ಇಂದು ಶೇ.81ರಷ್ಟಿದೆ. ಬಡತನ ರೇಖೆಗಿಂತ ಶೇ.20ರಷ್ಟಿದೆ. ಹೊರ ದೇಶಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡುತ್ತೇವೆ. ಅಗತ್ಯ ಮೂಲ ಸೌಕರ್ಯ ಹೊಂದಿದ್ದೇವೆ.
ಡಾ.ಎಚ್.ಎನ್.ನಾಗಮೋಹನ್ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ







