ಕಾಂಗ್ರೆಸ್‌ನಿಂದ ಅಬ್ದುಲ್ ಜಬ್ಬಾರ್ ಅಮಾನತು ವಿರೋಧಿಸಿ ಪ್ರತಿಭಟನೆ

ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಅಭಿಮಾನಿಗಳು, ಅಲ್ಪಸಂಖ್ಯಾತ ಸಮಾಜ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಅಖ್ತರ್ ರಝಾ ಸರ್ಕಲ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಅಬ್ದುಲ್ ಜಬ್ಬಾರ್ ಅವರ ಭಾವಚಿತ್ರ ಹಿಡಿದುಕೊಂಡು ಪಕ್ಷ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.
ಅಬ್ದುಲ್ ಜಬ್ಬಾರ್ ಅವರು ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ಹಗಲು-ಇರಳು ದುಡಿದಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಕೆಟ್ ಕೇಳಿದ್ದೇ ತಪ್ಪಾಯಿತಾ? ಶಾಮನೂರು ಶಿವಶಂಕರಪ್ಪ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿದಾಗ ಅವರ ವಿರುದ್ಧ ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ, ಉಪ ಚುನಾವಣೆಯಲ್ಲಿ ಟಿಕೆಟ್ ಕೇಳಿರುವುದಕ್ಕೆ ಜಬ್ಬಾರ್ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿಕೊಂಡು ಬಂದಿದ್ದಾರೆ. ಪಕ್ಷಕ್ಕಾಗಿ ಹಗಲು-ಇರಳು ಅಲ್ಪಸಂಖ್ಯಾತ ನಾಯಕರು ಶ್ರಮಿಸಿದ್ದಾರೆ. ದಾವಣಗೆರೆ ದಕ್ಷಿನ ಉಪ ಚುನಾವಣೆಯಲ್ಲಿ ಟಿಕೆಟ್ ಕೇಳಿದರು ಎಂಬ ಒಂದೇ ಕಾರಣಕ್ಕೆ ಮುಸ್ಲಿಮ್ ಸಮಾಜದ ನಾಯಕರಾದ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತು, ನಸೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ. ಕೂಡಲೇ ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿದು ಪುನಃ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಮುಹಮ್ಮದ್ ಸಿರಾಜ್, ಘನಿ ತಾಹೀರ್, ಎಸ್.ಕೆ.ಅಮ್ಜದ್ ವುಲ್ಲಾ, ಹುಲಿಮನಿ ರಹಮತುಲ್ಲಾ, ಎ.ಜಬ್ಬಾರ್, ಖಾದರ್ ಬಾಷಾ, ವಾಸೀಮ್ ಹಾಗೂ ಮುಸ್ಲಿಮ್ ಮುಖಂಡರು ಭಾಗವಹಿಸಿದ್ದರು.






