ದಾವಣಗೆರೆ ರೌಡಿಶೀಟರ್ ಕೊಲೆ ಪ್ರಕರಣ: 10 ಮಂದಿ ಆರೋಪಿಗಳು ಹೊಳಲ್ಕೆರೆ ಪೊಲೀಸರಿಗೆ ಶರಣು

ದಾವಣಗೆರೆ : ದಾವಣಗೆರೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾನನ್ನು ಹತ್ಯೆಗೈದು ಸ್ಥಳದಿಂದ ನಾಪತ್ತೆಯಾಗಿದ್ದ ಆರೋಪಿಗಳ ಪೈಕಿ 10 ಮಂದಿ ಮಂಗಳವಾರ ಸಂಜೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಹತ್ತು ಜನರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿತ್ರದುರ್ಗ ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು ವಿಚಾರಣೆ ನಂತರ ಕಣುಮನ ಹತ್ಯೆ ಆರೋಪಿಗಳನ್ನು ನ್ಯಾಯಾಧೀಶರ ಸಮಕ್ಷಮದಲ್ಲಿ ಹಾಜರುಪಡಿಸಿ, ದಾವಣಗೆರೆ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.
ದಾವಣಗೆರೆ ಭಾರತ ಕಾಲನಿ ನಿವಾಸಿ ಸಂತೋಷ್ ಅಲಿಯಾಸ್ ಚಾವಳಿ ಸಂತೋಷ, ಕಾರ್ತಿಕ್, ಪ್ರಭು, ನವೀನ್ ಅಲಿಯಾಸ್ ಬಾಕ್ರಿ, ರಾಜ ಅಲಿಯಾಸ್ ತಾರಕ್ ರಾಜ, ನವೀನ್ ಅಲಿಯಾಸ್ ಸೈಲೆಂಟ್ ನವೀನ, ಮಾರುತಿ, ಬಸವರಾಜ ಅಲಿಯಾಸ್ ಪಿಂಕಿ, ಜಯಸೂರ್ಯ, ಭರತ್ ಅಲಿಯಾಸ್ ಸ್ಲಂ ಪೊಲೀಸರಿಗೆ ಶರಣಾಗಿದ್ದು, ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆಂದು ಹೇಳಲಾಗಿದೆ.
ಪ್ರಕರಣ ಹಿನ್ನೆಲೆ: ಸೋಮವಾರ ಸಂಜೆ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾನ ಭೀಕರ ಹತ್ಯೆ ಆಗಿತ್ತು. ದಾವಣಗೆರೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದರ ಮುಂಭಾಗ ಆರೋಪಿಗಳು ಕೊಲೆ ಮಾಡಿದ್ದರು. ಕಣುಮಾನನ್ನು ಕೊಲೆ ಮಾಡಲು ಆಟೋದಲ್ಲಿ ಬಂದಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆಗೈದಿದ್ದರು.