ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ | ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ಗೆ ಬಿಟ್ಟದ್ದು ಎಂದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಅಂತಿಮಗೊಳಿಸುವ ವಿಚಾರವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದ ಜನತೆ ಅಪ್ಪಾಜಿ (ಶಾಮನೂರು ಶಿವಶಂಕರಪ್ಪ)ಯನ್ನು 6 ಬಾರಿ ಶಾಸಕರನ್ನು ಮತ್ತು ಒಮ್ಮೆ ಸಂಸದರನ್ನಾಗಿ ಮಾಡಿರುವುದಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದರು.
ಜನ ಸೇವೆ ಮಾಡುವವರ ಹೆಸರನ್ನು ನಾವು ಶಿಫಾರಸು ಮಾಡುತ್ತೇವೆ. ಹೈಕಮಾಂಡ್ ಜನರ ನಾಡಿಮಿಡಿತ ಅರಿತು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಅದಕ್ಕೆ ನಾವೆಲ್ಲರೂ ಬದ್ಧರಾಗಿ ಗೆಲ್ಲಿಸಿಕೊಂಡು ಬರುತ್ತೇವೆ. ಜನರು ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕೆಂದು ಕೋರಿದರು.
ಕೇಂದ್ರ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಕೇಂದ್ರ ಚುನಾವಣಾ ಆಯೋಗವು ಅವಸರದಲ್ಲಿ ಮತದಾರರ ಪಟ್ಟಿ ತೀವ್ರ ವಿಶೇಷ ಪರಿಷ್ಕರಣೆ ನಡೆಸುತ್ತಿದೆ. ಇದನ್ನು ಖಂಡಿಸಿ ಪ್ರತಿಭಟಿಸುತ್ತಿರುವ ನಮ್ಮ ಕಾಂಗ್ರೆಸ್ ಪಕ್ಷದ್ದು ಜನತೆಗೆ ವೋಟಿನ ಹಕ್ಕು ಸಿಗಬೇಕೆಂಬ ವಿಚಾರವಾಗಿದೆ. ವೋಟ್ ಚೋರಿ ಬಗ್ಗೆ ಜನರಿಗೂ ಮಾಹಿತಿ ಇದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಾಖಲೆ ಸಮೇತ ಮಾತನಾಡುತ್ತಿದ್ದರೂ ಚುನಾವಣಾ ಆಯೋಗ ಸಮರ್ಥವಾಗಿ ಉತ್ತರ ನೀಡಿಲ್ಲ ಎಂದು ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದರು.
‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಲೋಪ’
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪಾರದರ್ಶಕವಾಗಿ ನಡೆಯುತ್ತಿದೆಯಾ ಎಂಬ ಅನುಮಾನ ಇದೆ. ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆ ವೇಳೆ ಮೊದಲಿಗೆ 65 ಲಕ್ಷ ವೋಟ್ ಡಿಲೀಟ್ ಆಗಿದೆ ಎಂದಿದ್ದ ಚುನಾವಣಾ ಆಯೋಗವೇ ಈಗ 45 ಲಕ್ಷ ಮತಗಳು ರದ್ದಾಗಿವೆ ಎನ್ನುತ್ತಿದೆ. ಇದು ವಿಶೇಷ ಪರಿಷ್ಕರಣೆಯಲ್ಲಿ ಲೋಪಗಳಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದೂರಿದರು.







