Channagiri | ಕೆಎಸ್ಸಾರ್ಟಿಸಿ ಬಸ್ ಪಲ್ಟಿ; ವಿದ್ಯಾರ್ಥಿ ಮೃತ್ಯು, ಮೂವರು ಗಂಭೀರ, ಹಲವರಿಗೆ ಗಾಯ

ದಾವಣಗೆರೆ, ಮೇ 8 : ದಾವಣಗೆರೆಯಿಂದ ಬಸವಾಪಟ್ಟಣಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಶುಕ್ರವಾರ ಬೆಳಗ್ಗೆ 9:30ರ ಸುಮಾರಿಗೆ ಚನ್ನಗಿರಿ ತಾಲೂಕಿನ ಮರಬನಹಳ್ಳಿ ಬಳಿ ಆಕ್ಸಲ್ ಕಟ್ ಆಗಿ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಬಸ್‌ನಲ್ಲಿದ್ದ ಓರ್ವ ವಿದ್ಯಾರ್ಥಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಕುಂದೂರು ಗ್ರಾಮದ ದರ್ಶನ್(21) ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿ.
ಬಸ್ ಪಲ್ಟಿಯಾದ ಹಿನ್ನೆಲೆಯಲ್ಲಿ 66ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅದರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತ ಸ್ಥಳದಿಂದ ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಸಂಚಾರ ಅಸ್ತವ್ಯಸ್ತವಾಗಿತ್ತು.
ಮಾಹಿತಿ ತಿಳಿಯುತ್ತಿ ದ್ದಂತೆ 4 ತುರ್ತು 108 ವಾಹನಗಳು, ಬಸವಾಪಟ್ಟಣ ಪೊಲೀಸ್ ಸಿಬ್ಬಂದಿ ಮತ್ತು ಖಾಸಗಿ ವಾಹನಗಳು ಸ್ಥಳಕ್ಕೆ ಧಾವಿಸಿದವು. ಗಾಯಾಳುಗಳನ್ನು ಬಸವಾಪಟ್ಟಣ ಸರಕಾರಿ ಆಸ್ಪತ್ರೆ, ದಾವಣಗೆರೆ ಜಿಲ್ಲಾ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ, ಮಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ದಾವಣಗೆರೆ ಜಿಲ್ಲಾ ಎಸ್ಪಿ ಎಚ್.ಟಿ. ಶೇಖರ್ ಸ್ಥಳ ಪರಿಶೀಲಿಸಿ, ಅಪಘಾತದಲ್ಲಿ ಆಗಿರುವ ಸಮಸ್ಯೆಗಳನ್ನು ಮೊದಲು ಪರಿಹರಿಸಿ ಬಸ್ ಮತ್ತು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಥಳಕ್ಕೆ ಡಿವೈಎಸ್ಪಿರುದ್ರಪ್ಪ ಉಜ್ಜನಿಕೊಪ್ಪ, ಚನ್ನಗಿರಿ ಸಿಪಿಐ ರವೀಶ್, ಪಿಎಸ್ಸೈ ಅರುಣ್, ಹಾರನ್ ಅಖ್ತರ್ ಸೇರಿದಂತೆ 50ಕ್ಕೂ ಹೆಚ್ಚು ಜಿಲ್ಲಾ ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್ಸಾರ್ಟಿಸಿ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಗಾಯಾಳುಗಳ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ: ಅಪಘಾತ ವಿಷಯ ತಿಳಿಯುತ್ತಿದ್ದಂತೆಯೇ ದಾವಣಗೆರೆ ಜಿಲ್ಲಾಧಿಕಾರಿ ಯವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ಸ್ಥಿತಿಗತಿಯನ್ನು ವಿಚಾರಿಸಿದರು. ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ಹಾಗೂ ಅವರ ಕುಟುಂಬದವರಿಗೆ ಧೈರ್ಯ ತುಂಬಿದ ಅವರು, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚಿಸಿ, ಗಾಯಾಳುಗಳಿಗೆ ಯಾವುದೇ ವಿಳಂಬವಿಲ್ಲದೆ ತುರ್ತು ಮತ್ತು ಗುಣಮಟ್ಟದ ಚಿಕಿತ್ಸೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಗಂಭೀರವಾಗಿ ಗಾಯಗೊಂಡವರಿಗೆ ವಿಶೇಷ ನಿಗಾ ವಹಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಗ್ರಾಮಸ್ಥರ ಆಗ್ರಹ
ಮೃತ ವಿದ್ಯಾರ್ಥಿಯ ಕುಟುಂಬಸ್ಥರಿಗೆ 50 ಲಕ್ಷ ರೂ., ಪ್ರತೀ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ನೀಡಬೇಕು. ದಾಖಲಾಗಿರುವ ಎಲ್ಲ ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಅನುಕೂಲವಾಗುವಂತೆ 5 ಹೊಸ ಬಸ್ಸುಗಳನ್ನು ತಕ್ಷಣ ಬಿಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ನಿರ್ವಹಣಾ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆ ಮತ್ತು ಪೊಲೀಸ್ ಠಾಣೆಯಲ್ಲಿ ನೋಂದಾಯಿತ ಎಲ್ಲ ಗಾಯಾಳುಗಳ ಚಿಕಿತ್ಸಾ ವೆಚ್ಚ ಸಂಸ್ಥೆಯೇ ಭರಿಸಲಿದೆ.ತಕ್ಷಣ ಈ ಭಾಗಕ್ಕೆ ಕನಿಷ್ಠ 2 ಹೊಸ ಬಸ್‌ಗಳನ್ನು ಬಿಡುವುದಕ್ಕೆ ಪ್ರಯತ್ನಿಸಲಾಗುವುದು.
-ಕಿರಣ್‌ಕುಮಾರ್ ಬಸವಪುರ್, ಕೆಎಸ್ಸಾರ್ಟಿಸಿ ಡಿಸಿ
ಬಸ್ ಪಲ್ಟಿಯಾದ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿರುವುದು ತುಂಬಾ ನೋವಿನ ಸಂಗತಿಯಾಗಿದೆ. ವಿದ್ಯಾರ್ಥಿಯ ಕುಟುಂಬಕ್ಕೆ ಸರಕಾರದಿಂದ 10 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗಾಯಳುಗಳಿಗೂ ಪರಿಹಾರ ನೀಡುವುದಕ್ಕೆ ಪ್ರಯತ್ನಿಸುತ್ತೇನೆ.
-ಶಾಸಕ ಕೆ.ಎಸ್. ಬಸವಂತಪ್ಪ






