ದಾವಣಗೆರೆ | ಅನುಮತಿಯಿಲ್ಲದೆ ಗರ್ಭಿಣಿ ಮೇಲೆ ಸಂಶೋಧನೆ : ಆರೋಪ
ವೈದ್ಯರ ವಿರುದ್ಧ ಕ್ರಮಕ್ಕೆ ಮನವಿ

ಎ.ಗೋಪಾಲ್
ದಾವಣಗೆರೆ : ನನ್ನ ಪತ್ನಿ ಹಾಗೂ ಪತ್ನಿಯ ಹೊಟ್ಟೆಯಲ್ಲಿದ್ದ 8 ತಿಂಗಳ ಮಗುವನ್ನು ನಮ್ಮ ಒಪ್ಪಿಗೆ ಇಲ್ಲದೆ ಮೋಸದಿಂದ ಸಹಿ ಮಾಡಿಸಿಕೊಂಡು ಸಂಶೋಧನೆಗೆ ಒಳಪಡಿಸಿದ WHO ACTION TRAIL-3 ಸಿ ಸಂಶೋಧನಾ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲವೆ ನನಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಎ.ಗೋಪಾಲ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಅಕ್ಟೋಬರ್ 18ರಂದು ಎಂದಿನಂತೆ ತಪಾಸಣೆಗೆ 8 ತಿಂಗಳ ಗರ್ಭಿಣಿಯಾದ ನನ್ನ ಪತ್ನಿಯನ್ನು ನಗರದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಆಗ ಅಲ್ಲಿನ ವೈದ್ಯರು ಇಲ್ಲಸಲ್ಲದ ನೆಪ ಹೇಳಿ ನಮ್ಮಿಂದ ಸಹಿ ಪಡೆದು 8 ತಿಂಗಳ ಗರ್ಭಿಣಿ ಮೇಲೆ ಸಂಶೋಧನೆ ನಡೆಸಿದ್ದಾರೆ. ಇದು ಅಪರಾಧ. ಜತೆಗೆ, ಇದರಿಂದ 8 ತಿಂಗಳಲ್ಲೇ ಹೆರಿಗೆಯಾದ ಕಾರಣ ಮಗು ಬೆಳವಣಿಗೆ ಕುಂಠಿತಗೊಂಡಿದೆ ಎಂದು ಆರೋಪಿಸಿದರು.
ಈ ಕುರಿತು ಎಲ್ಲ ವೈದ್ಯರು ಸೇರಿದಂತೆ ಪೊಲೀಸ್, ಮಹಿಳಾ ಆಯೋಗ, ಜಿಲ್ಲಾಧಿಕಾರಿ, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರೂ ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ. ಇದರಿಂದ ನಾನು ಬೇಸತ್ತಿದ್ದು ನಮ್ಮ ಅನುಮತಿ ಇಲ್ಲದೆ ಸಂಶೋಧನೆ ನಡೆಸಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲವೆ ನನಗೆ ದಯಾಮರಣಕ್ಕೆ ಅವಕಾಶ ಕಲ್ಪಿಸಿ ಎಂದು ಜ. 6ರಂದು ಅರ್ಜಿ ಸಲ್ಲಿಸಿದ್ದೇನೆ ಎಂದು ವಿವರಿಸಿದರು.





