ದಾವಣಗೆರೆ: ಪತ್ನಿಯ ನಡವಳಿಕೆಯಿಂದ ನೊಂದು ಪತಿ, ಸೋದರ ಮಾವ ಆತ್ಮಹತ್ಯೆ

ಹರೀಶ್
ದಾವಣಗೆರೆ: ಪತ್ನಿಯ ನಡವಳಿಕೆಯಿಂದ ಮನನೊಂದು ನವ ವಿವಾಹಿತ ಹಾಗೂ ಮದುವೆ ಮಾಡಿಸಿದ ವಧುವಿನ ಸೋದರ ಮಾವ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ವರದಿಯಾಗಿದೆ.
ಗುಮ್ಮನೂರು ಗ್ರಾಮದ ಹರೀಶ್ ಹಾಗೂ ಆನೆಕೊಂಡದ ರುದ್ರೇಶ್ ಮೃತಪಟ್ಟವರು. ಸುಮಾರು ಒಂದೂವರೆ ತಿಂಗಳ ಹಿಂದೆಯಷ್ಟೇ ಹರೀಶ್ ಅವರಿಗೆ ಸರಸ್ವತಿ ಎಂಬ ಯುವತಿಯೊಂದಿಗೆ ವಿವಾಹವಾಗಿತ್ತು. ಈ ಸಂಬಂಧವನ್ನು ಸರಸ್ವತಿಯ ಸೋದರ ಮಾವ ರುದ್ರೇಶ್ ಅವರೇ ಮುಂದೆ ನಿಂತು ಮಾತುಕತೆ ನಡೆಸಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿ ಸರಸ್ವತಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಇತ್ತೀಚೆಗೆ ಆಕೆ ತನ್ನ ಪ್ರಿಯಕರ ಕುಮಾರ್ ಎಂಬಾತನ ಜೊತೆ ಓಡಿ ಹೋಗಿದ್ದಳು ಎನ್ನಲಾಗಿದೆ.
ಈ ನಡುವೆ, ಪತ್ನಿ, ಆಕೆಯ ಕಡೆಯವರು ಹರೀಶ್ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ಪ್ರಾಣ ಬೆದರಿಕೆ ಹಾಕುತ್ತಿದ್ದರೆನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ಹರೀಶ್ ಸೋಮವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರೀಶ್ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಮದುವೆ ಮಾಡಿಸಿದ್ದ ಸೋದರ ಮಾವ ರುದ್ರೇಶ್ ತೀವ್ರ ಆಘಾತಕ್ಕೆ ಒಳಗಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಡೆತ್ ನೋಟ್ ಪತ್ತೆ:
ಆತ್ಮಹತ್ಯೆಗೂ ಮುನ್ನ ಹರೀಶ್ ಬರೆದಿಟ್ಟಿದ್ದಾರೆ ಎನ್ನಲಾಗಿರುವ ಎರಡು ಪುಟಗಳ ಡೆತ್ ನೋಟ್ ಲಭ್ಯವಾಗಿದೆ. ‘ನನ್ನ ಸಾವಿಗೆ ಪತ್ನಿ ಸರಸ್ವತಿ ಮತ್ತು ಆಕೆಯ ಮನೆಯವರೇ ಕಾರಣ. ಮದುವೆಯಾದಾಗಿನಿಂದ ನೆಮ್ಮದಿ ಇಲ್ಲದಂತೆ ಮಾಡಿದ್ದಾಳೆ. ಅವಳು ಬೇರೆಯವನ ಜೊತೆ ಓಡಿ ಹೋದರೂ ನನಗೇ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಪೋಷಕರಿಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಮಾನ-ಮರ್ಯಾದೆಯೇ ಮುಖ್ಯ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ದಾವಣಗೆರೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







