ದಾವಣಗೆರೆ: ಅಬ್ದುಲ್ ಜಬ್ಬಾರ್, ನಸೀರ್ ಅಹ್ಮದ್ ವಜಾಕ್ಕೆ ಖಂಡನೆ

ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅಮಾನತು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದನ್ನು ಖಂಡಿಸಿ ಜಿಲ್ಲೆಯ ವಿವಿಧ ಮಸೀದಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಜಾಗೃತಿ ವೇದಿಕೆಯ ಅಧ್ಯಕ್ಷ ಅಬ್ದುಲ್ ಘನಿ ತಾಹಿರ್, ದಾವಣಗೆರೆ ಉಪ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ನಡೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮುಸ್ಲಿಮ್ ಸಮುದಾಯಕ್ಕೆ ಅವಕಾಶ ನೀಡುವ ಭರವಸೆ ಇದ್ದರೂ, ಕುಟುಂಬ ರಾಜಕಾರಣ, ಜಾತಿ ಮತ್ತು ಹಣದ ಪ್ರಭಾವಕ್ಕೆ ಮಣಿದಿರುವುದು ಜಾತ್ಯತೀತ ಶಕ್ತಿಗಳ ನಿರೀಕ್ಷೆಗಳನ್ನು ಸುಳ್ಳಾಗಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಅವಕಾಶವಾದಿ ರಾಜಕಾರಣದಿಂದ ಅಲ್ಪಸಂಖ್ಯಾತರು ಮತ್ತು ಪ್ರಗತಿಪರ ಶಕ್ತಿಗಳಲ್ಲಿ ಬೇಸರ ಉಂಟಾಗಿದೆ. ಫಲಿತಾಂಶ ಏನೇ ಬಂದರೂ ಕಾಂಗ್ರೆಸ್ ನೈತಿಕವಾಗಿ ಸೋತಿದೆ ಎಂಬ ಭಾವನೆ ಮೂಡಿದೆ. ಪರಿಣಾಮವಾಗಿ ಕೆಲವರು ಕಾಂಗ್ರೆಸ್‌ಗೆ ಮತ ಹಾಕಿದರೂ, ಕೆಲವರು ವಿರೋಧವಾಗಿ ಮತ ಹಾಕಿದ್ದು ಅಥವಾ ಮತದಾನದಿಂದ ದೂರ ಉಳಿದಿದ್ದು, ಸಮುದಾಯದೊಳಗೆ ಗೊಂದಲ ಸ್ಪಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಂಝೀಂ ಮಾಜಿ ಪ್ರಧಾನ ಕಾರ್ಯದರ್ಶಿ ವೈ.ಎಂ.ಫಕ್ರುದ್ದೀನ್ ಮಾತನಾಡಿ, ದಾವಣಗೆರೆಯ ರಾಜಕೀಯ ಗೊಂದಲಗಳ ಪರಿಹರಿಸುವ ಹೊಣೆಗಾರಿಕೆ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಿದೆ. ಚುನಾವಣೆ ನಂತರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗೊಂದಲ ಉಂಟು ಮಾಡಿದ ನಾಯಕರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು. ಆತ್ಮಾವಲೋಕನ ಮಾಡುವ ಬದಲು ಪಕ್ಷ ಅಲ್ಪಸಂಖ್ಯಾತ ನಾಯಕರ ನಡುವೆ ಭಿನ್ನತೆ ಉಂಟು ಮಾಡಲು ಪ್ರಯತ್ನಿಸುತ್ತಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಈ ಬೆಳವಣಿಗೆಗಳು ೨೦೨೮ರ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆಯಾಗಿವೆ. ಅಲ್ಪಸಂಖ್ಯಾತರು, ದಲಿತರು ಮತ್ತು ಜಾತ್ಯತೀತ ಶಕ್ತಿಗಳನ್ನು ನಿರ್ಲಕ್ಷ್ಯ ಮಾಡಿದರೆ ಅವರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಇದೆ. ಈಗಲಾದರೂ ನಾಯಕತ್ವ ತಪ್ಪು ತಿದ್ದಿಕೊಂಡು ನಂಬಿಕೆ ಗಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಫಕ್ರುದ್ದೀನ್ ಕಿವಿಮಾತು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಟಿಜೆ ನಗರ ಮಸೀದಿಯ ಸಮೀರ್, ವಿನೋಬನಗರ ಮಸೀದಿಯ ಖಾಸಿಂ ಸಾಬ್, ಖುಬ್ರಾ ಮಸೀದಿಯ ಉಲ್ಮಾ ನಿ ರೆಹಮಾನ್, ಎಸ್‌ಜೆಎಂ ನಗರದ ನೂರುಲ್ಲಾ ಮಸೀದಿಯ ಖಲೀಮುಲ್ಲಾ, ಭಗತ್ ಸಿಂಗ್ ನಗರದ ಮಸೀದಿಯ ಇ.ಎ.ಜಬ್ಬಾರ್, ಪಾದ್ರಿ ರಾಜಶೇಖರ್ ಸೇರಿದಂತೆ ಬಾಷಾ ನಗರ, ಎಸ್.ಎಸ್.ಎಂ. ನಗರ, ಶಿವಾನಗರ, ಬಾರ್‌ಲೈನ್ ರೋಡ್, ದೇವರಾಜ್ ಅರಸ್ ಲೇ ಔಟ್, ಸಂತೆಬೆನ್ನೂರು, ಹಿಮಾಮನಗರ, ನರಸರಾಜಪೇಟೆ, ಚೌಕಿಪೇಟೆ, ಬಿಎನ್ ಲೇಔಟ್, ಆಝಾದ್ ನಗರ, ಅಹ್ಮದ್ ನಗರ, ಮುಸ್ತಫ ನಗರ, ರಿಂಗ್ ರಸ್ತೆ, ಮಂಡಕ್ಕಿ ಭಟ್ಟಿ ಲೇಔಟ್, ದೇವರಾಜ್ ನಗರ ಸೇರಿದಂತೆ ಹಲವು ಮಸೀದಿಗಳ ಅಧ್ಯಕ್ಷರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.






