ದಾವಣಗೆರೆ ದಕ್ಷಿಣದ ಅಖಾಡದಲ್ಲಿ ʼಕೈʼ ನಾಯಕರಿಗೆ ಮುಖಭಂಗ: ಪೈಲ್ವಾನ್ ಪಟ್ಟು, ಸಂಧಾನ ಫ್ಲಾಪ್!

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ಕಾಂಗ್ರೆಸ್ ಬಂಡಾಯದ ಕಿಚ್ಚು ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರ ಮನವೊಲಿಸಲು ಗುರುವಾರ ನಡೆಸಿದ ಸಂಧಾನ ಸಭೆ ಅಂತಿಮವಾಗಿ ವಿಫಲವಾಗಿದೆ. ನಾಮಪತ್ರ ಹಿಂಪಡೆಯಲು ನೀಡಿದ್ದ ಗಡುವು ಮುಗಿದರೂ ಪೈಲ್ವಾನ್ ಕಣದಿಂದ ಸರಿಯದ ಕಾರಣ, ಕೈ ಪಾಳಯದಲ್ಲಿ ಈಗ ಆತಂಕ ಮನೆಮಾಡಿದೆ.
ಮಧ್ಯಾಹ್ನ 3 ಗಂಟೆಗೆ ನಾಮಪತ್ರ ವಾಪಸ್‌ಗೆ ಗಡುವು ಇತ್ತು. ಆದರೆ ಬೆಂಗಳೂರಿನ ನಾಯಕರು ಬರುವಷ್ಟರಲ್ಲಿ 2:45 ಆಗಿತ್ತು. ಈ ವೇಳೆ ಪೈಲ್ವಾನ್ ಮನೆ ಮುಂದೆ ಜಮಾಯಿಸಿದ್ದ ನೂರಾರು ಬೆಂಬಲಿಗರಿಂದ ನಾಯಕರ ವಿರುದ್ಧ 'ಗೋ ಬ್ಯಾಕ್' ಘೋಷಣೆ ಕೇಳಿ ಬಂತು.
ವಿಧಾನ ಪರಿಷತ್ತಿನ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹಾಗೂ ಶಾಸಕ ರಿಝ್ವಾನ್ ಅರ್ಷದ್‌ರಿಂದ ಗುಪ್ತ ಸಭೆ ನಡೆದರೂ ಸಂಧಾನ ಸಭೆ ಫಲ ನೀಡಿಲ್ಲ.
ಸಚಿವ ಝಮೀರ್ ಅಹ್ಮದ್ ಬರುವ ನಿರೀಕ್ಷೆಯಲ್ಲಿದ್ದ ಬೆಂಬಲಿಗರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಶಾಸಕ ರಿಝ್ವಾನ್ ಅರ್ಷದ್ ಅವರನ್ನು ಕಂಡು ಆಕ್ರೋಶ ಹೊರಹಾಕಿದರು. "ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಬೇಡಿ" ಎಂದು ಪೈಲ್ವಾನ್ ಮೇಲೆ ಬೆಂಬಲಿಗರು ಒತ್ತಡ ಹೇರಿದರು. ಅಂಗಳದಲ್ಲಿ ಮಾತುಕತೆ ಅಸಾಧ್ಯವಾದಾಗ ನಾಯಕರು ಪೈಲ್ವಾನ್ ಅವರನ್ನು ಮನೆಯೊಳಗೆ ಕರೆದೊಯ್ದು ಚರ್ಚೆ ನಡೆಸಿದರು.
ಮಧ್ಯಾಹ್ನ 2:50ಕ್ಕೆ ಮನೆಯಿಂದ ಹೊರಬಂದ ನಾಯಕರು, "ಸಮಯದ ಅಭಾವದಿಂದ ನಾಮಪತ್ರ ಹಿಂಪಡೆಯಲು ಸಾಧ್ಯವಾಗಲಿಲ್ಲ. ಪೈಲ್ವಾನ್ ನಮ್ಮ ಕುಟುಂಬದ ಸದಸ್ಯರು, ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ" ಎಂದು ಮಾಧ್ಯಮಗಳಿಗೆ ತಿಳಿಸಿದರು. ಆದರೆ ಅಷ್ಟರಲ್ಲಾಗಲೇ ಚುನಾವಣಾ ಅಖಾಡದಲ್ಲಿ ಪೈಲ್ವಾನ್ ಹೆಸರು ಅಧಿಕೃತವಾಗಿ ಉಳಿದುಕೊಂಡಿತ್ತು.







