ಸರಕಾರಿ ಜಾಗ ಒತ್ತುವರಿ ಆರೋಪ; ದಾವಣಗೆರೆ ಮಹಾನಗರ ಪಾಲಿಕೆಯಿಂದ ಮನೆಗಳ ತೆರವು ಕಾರ್ಯಾಚರಣೆ

ದಾವಣಗೆರೆ: ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ವಿಜಯನಗರ ಬಡಾವಣೆಯಲ್ಲಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸರ ಬಂದೋಬಸ್ತಿನಲ್ಲಿ ಮಂಗಳವಾರ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.
ಯಾವುದೇ ಸೂಚನೆ, ಕಾಲಾವಕಾಶ ನೀಡದೇ ತೆರವಿಗೆ ಮುಂದಾಗಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆಯಿತು.
ಸುಮಾರು 25 ವರ್ಷಗಳ ಹಿಂದೆ ಕೊಂಡಜ್ಜಿ ರಸ್ತೆಯ ನಿವಾಸಿ ರಾಮಪ್ಪ ಗೌಡರು ಒಟ್ಟು 16 ಮನೆ ನಿರ್ಮಿಸಿದ್ದರು. ಈ ಮನೆಗಳನ್ನು ಪಾಲಿಕೆಯ ಪಾರ್ಕ್ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡರು. ಮೂರು ಮನೆಗಳನ್ನು ಒಡೆದು ಹಾಕಿದ ನಂತರ ಜಿಲ್ಲಾಧಿಕಾರಿಯವರು ಮನೆಗಳ ತೆರವಿಗೆ ಎರಡು ದಿನ ಕಾಲಾವಕಾಶ ನೀಡಿ ಆದೇಶಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಮನೆಗಳ ತೆರವು ಕಾರ್ಯಾಚರಣೆ ಅರ್ಧಕ್ಕೆ ಕೈಬಿಟ್ಟರು.
‘ಯಾವುದೇ ನೋಟಿಸ್ ನೀಡದೆ ಏಕಾಏಕಿ ಮನೆಗಳನ್ನು ತೆರವುಗೊಳಿಸಿದ್ದಾರೆ. ಪೊಲೀಸರು ಮಹಿಳೆಯರನ್ನು ಮನೆಯಿಂದ ಹೊರಗೆ ಎಳೆದು ಹಾಕಿ ದೌರ್ಜನ್ಯ ಎಸಗಿದ್ದಾರೆ. ಮನೆಯ ಮಾಲಕರಿಗೆ ನೋಟೀಸ್ ನೀಡಿದ್ದಾರಂತೆ. ಆದರೆ, ಅವರು ನಮಗೆ ತಿಳಿಸಿಲ್ಲ. ಈಗ ನಮ್ಮ ಬದುಕು ಬೀದಿಗೆ ಬಂದಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಮನೆ ಬಾಡಿಗೆದಾರ ನಿರಂಜನ್ ಮಾತನಾಡಿ, ದಾವಣಗೆರೆಯಲ್ಲಿ ಈ ರೀತಿ ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಸಾಕಷ್ಟು ಕಡೆ ಮನೆ ನಿರ್ಮಿಸಲಾಗಿದೆ. ಅಧಿಕಾರಿಗಳು ಅವರ ಮೇಲೂ ಕ್ರಮ ಕೈಗೊಳ್ಳಲಿ. ಇಲ್ಲಿ ನಾಲ್ಕು ಮನೆಗಳನ್ನು ಒಡೆದು ಹಾಕಿದರೆ ಸಾಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನೆಗಳ ಮಾಲಕ ರಾಮಪ್ಪಗೌಡರು ಮಾತನಾಡಿ, ಅಧಿಕಾರಿಗಳು ನಮಗೆ ನೋಟೀಸ್ ಕೂಡ ನೀಡದೆ ಮನೆಗಳ ತೆರವಿಗೆ ಬಂದಿದ್ದಾರೆ. ಅಧಿಕಾರಿಗಳು ನೋಟೀಸ್ ನೀಡಿದ್ದೇವೆ ಎನ್ನುತ್ತಿದ್ದು, ಅದು ನೋಟೀಸ್ ಅಲ್ಲ. ಇ-ಸ್ವತ್ತು ಪತ್ರ. ಅದು ಹೇಗೆ ನೋಟೀಸ್ ಆಗಲು ಸಾಧ್ಯ? ಎಂದು ಪ್ರಶ್ನಿಸಿದರು.
25 ವರ್ಷಗಳ ಹಿಂದೆಯೇ ಮನೆಗಳನ್ನು ನಿರ್ಮಿಸಿದ್ದೇವೆ. ಹಿಂದೆ ಜಮೀನಾಗಿತ್ತು, ವಂಶ ಪಾರಂಪರ್ಯವಾಗಿ ನಮಗೆ ಬಂದಿದೆ. ಮನೆಗೆ ವಿದ್ಯುತ್ ಬಿಲ್, ನೀರಿನ ಬಿಲ್ ಸೇರಿದಂತೆ ಎಲ್ಲ ದಾಖಲೆಗಳನ್ನು ಕೊಟ್ಟು, ಕೆಲವೇ ತಿಂಗಳುಗಳ ಹಿಂದೆ ಕಂದಾಯ ಹಣವನ್ನು ಕಟ್ಟಿಸಿಕೊಂಡ ಅಧಿಕಾರಿಗಳು ಐದು ತಿಂಗಳಿನಿಂದ ಸರಕಾರಿ ಜಾಗ, ಪಾರ್ಕ್ ಜಾಗ ಎನ್ನುತ್ತಿದ್ದಾರೆ.
-ರಾಮಪ್ಪಗೌಡ, ಮನೆಗಳ ಮಾಲಕ







