ದಾವಣಗೆರೆ | ಬಲೆಗೆ ಬಿದ್ದ 32 ಕೆಜಿ ತೂಕದ ಹದ್ದಿನ ಮೀನು!

ದಾವಣಗೆರೆ, ಜ.2: ಮೀನುಗಾರರು ಬೀಸಿದ ಬಲೆಗೆ ಬೃಹತ್ ಗಾತ್ರದ (ಸುಮಾರು 32 ಕೆಜಿ) ಹದ್ದಿನ ಜಾತಿಗೆ ಸೇರಿದ ಮೀನು ಬಿದ್ದಿರುವುದಾಗಿ ವರದಿಯಾಗಿದೆ.
ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಪಕ್ಕದಲ್ಲೇ ಹರಿಯುತ್ತಿರುವ ತುಂಗಭದ್ರಾ ನದಿಯ ಗೋರಿಕಲ್ಲು ಸಮೀಪ 12 ರಿಂದ 15 ಆಳ ಹರಿಯುವ ಸ್ಥಳದಲ್ಲಿ ಶುಕ್ರವಾರ ಭದ್ರಾವತಿಯ ಮೀನುಗಾರರಾದ ಮಣಿ, ಬಾಬು, ಅಯ್ಯಪ್ಪಎಂಬವರು ಮೀನು ಹಿಡಿಯಲು ದೋಣಿಯ ಮೂಲಕ ತೆರಳಿ ಬೀಸುವ ಬಲೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಲ್ಲಿನ ಪೊಟರೆಗಳಲ್ಲಿ ವಾಸಿಸುವ ಹದ್ದಿನ ಜಾತಿಗೆ ಸೇರಿದ ಬೃಹತ್ ಗಾತ್ರದ ಮೀನು ಬಿದ್ದಿದೆ ಎಂದು ತಿಳಿದು ಬಂದಿದೆ.
ಬಲೆಗೆ ಬಿದ್ದ 4 ರಿಂದ 5 ಅಡಿ ಉದ್ದವಿರುವ ಬರೋಬ್ಬರಿ 32 ಕೆಜಿ ತೂಕದ ಹದ್ದಿನ ಜಾತಿಗೆ ಸೇರಿದ ಮೀನನ್ನು ದಡಕ್ಕೆ ತರಲು ಅರ್ಧ ಗಂಟೆಗಳ ಕಾಲ ಮೀನುಗಾರರು ಹರಸಾಹಸ ಪಟ್ಟರು.
ಸುದ್ದಿ ತಿಳಿದು ಜಮಾಯಿಸಿದ ಜನರು :
ಮೀನುಗಾರರ ಬಲೆಗೆ ಭಾರೀ ಗಾತ್ರದ ಮೀನು ಬಿದ್ದಿದೆ ಎಂಬ ಸುದ್ದಿ ತಿಳಿದ ಗ್ರಾಮಸ್ಥರು ಮೀನು ಮಾರುವ ಅಂಗಡಿ ಬಳಿ ಜಮಾಯಿಸಿ ವೀಕ್ಷಣೆ ಮಾಡಿದರು.
11,200 ರೂ.ಗೆ ಮಾರಾಟ :
32 ಕೆಜಿ ಭಾರೀ ಗಾತ್ರದ ಮೀನನ್ನು ಸ್ಥಳೀಯ ಮೀನು ವ್ಯಾಪಾರಿ ಸಾದಿಕ್ ಎಂಬವರಿಗೆ 11,200 ರೂ.ಗೆ ಮೀನುಗಾರರು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.







