Davangere | ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ಐವರು ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಆರೋಪ; 42 ಜನರ ವಿರುದ್ಧ ಪ್ರಕರಣ ದಾಖಲು

ಚನ್ನಗಿರಿ (ದಾವಣಗೆರೆ) : ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ಐದು ಮಂದಿ ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಘಟನೆಯಲ್ಲಿ ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 42 ಜನರ ವಿರುದ್ದ ಪ್ರಕರಣ ದಾಖಲಾಗಿದೆ.
ಶುಕ್ರವಾರ ಗ್ರಾಮದಲ್ಲಿ ʼಅಜ್ಜಿಹಬ್ಬʼದ ಆಚರಣೆಯ ಅಂಗವಾಗಿ ದಲಿತ ಸಮುದಾಯದವರು ಸಂಪ್ರದಾಯದಂತೆ ಎಡೆ ಹಾಗೂ ‘ಅಮ್ಮ (ಕೇಲು)'ಗಳನ್ನು ಪೂಜಿಸಿ ಗ್ರಾಮದ ಗಡಿಭಾಗಕ್ಕೆ ಕೊಂಡೊಯ್ಯುವ ವೇಳೆ ದೊಡ್ಡಯ್ಯಸ್ವಾಮಿ ದೇವಸ್ಥಾನದ ಬಳಿ ತೆರಳಿದ್ದರು.
ಈ ವೇಳೆ ಗ್ರಾಮದ ಕೆಲವರು ‘ದೇವಸ್ಥಾನದ ಬಳಿ ಬರಬಾರದು’ ಎಂದು ತಡೆದು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ವೇಳೆ ಎರಡು ಬಣಗಳ ನಡುವೆ ಘರ್ಷಣೆ ನಡೆದಿದ್ದು, ಐವರು ದಲಿತ ಯುವಕರು ಗಾಯಗೊಂಡಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಡಾ.ಎಚ್.ಟಿ.ಶೇಖರ್, ಉಪವಿಭಾಗಾಧಿಕಾರಿ ಡಾ. ಚನ್ನಪ್ಪ, ತಹಸೀಲ್ದಾರ್ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳ ಸಮ್ಮುಖದಲ್ಲೇ ದಲಿತ ಸಮುದಾಯದವರಿಗೆ ದೇವಸ್ಥಾನದ ಒಳಗೆ ಪ್ರವೇಶ ಕಲ್ಪಿಸಿ ದೇವರ ದರ್ಶನ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ‘ಕಾನೂನಿನ ಮುಂದೆ ಎಲ್ಲರೂ ಸಮಾನರು. ಜಾತಿ ಆಧಾರಿತ ತಾರತಮ್ಯ ಅಥವಾ ಸಾರ್ವಜನಿಕ ಸ್ಥಳಗಳು, ಹೋಟೆಲ್, ಕಟಿಂಗ್ ಶಾಪ್ ಹಾಗೂ ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ರುದ್ರಭೂಮಿಯ ಜಾಗ ಅತಿಕ್ರಮಣಗೊಂಡಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ತಕ್ಷಣವೇ ತೆರವುಗೊಳಿಸಲು ಸೂಚನೆ ನೀಡಿದರು. ಅವರ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಎನ್.ಜೆ. ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಬೇಲಿ ತೆರವುಗೊಳಿಸಿದರು.
ಎಸ್ಪಿ ಡಾ.ಎಚ್.ಟಿ.ಶೇಖರ್ ಮಾತನಾಡಿ, ದಲಿತರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ. ಚನ್ನಪ್ಪ ಮಾತನಾಡಿ, ಘಟನೆ ಸಂಬಂಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಸಂವಿಧಾನದ ಪ್ರಕಾರ ಎಲ್ಲರಿಗೂ ದೇವಾಲಯ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸುವ ಹಕ್ಕು ಇದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರ ಬೀಳಲಿದೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು.
ಸ್ಥಳದಲ್ಲಿ ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ್, ತಹಸೀಲ್ದಾರ್ ಎನ್.ಜೆ. ನಾಗರಾಜ್, ದಲಿತ ಸಂಘಟನೆಗಳ ಮುಖಂಡರಾದ ಕಗತೂರು ಆನಂದ್, ಬಸಾಪುರ ರಂಗನಾಥ್, ಕುಬೇಂದ್ರಸ್ವಾಮಿ, ಪ್ರಭಾಕರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.






